ಯಡ್ತರೆ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಚಿವ ಕೋಟ ಭೇಟಿ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು: ದಮನಿತರ ಧ್ವನಿಯಾಗಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಒತ್ತುಕೊಟ್ಟಂತಹ ಕೋಟಿ ಚೆನ್ನಯ್ಯರು ತಾವು ಸಾಗಿಸಿದ ಆದರ್ಶ ಬದುಕಿನ ಸಂಕೇತ ಈ ಗರಡಿಗಳ ಕಲ್ಪನೆಗಳಲ್ಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.  ಬೈಂದೂರಿನ ಯಡ್ತರೆಯ ನಾಕಟ್ಟೆಯಲ್ಲಿ ನೂತನ ನಿರ್ಮಾಣಗೊಂಡು ಪ್ರಸ್ತುತ ಗರ್ಭಗೃಹ ಸಮರ್ಪಣೆ, ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿರುವ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಶನಿವಾರ ಭೇಟಿನೀಡಿ, ಸಂಜೀವಿನಿ ಮೃತ್ಯುಂಜಯ ಹೋಮದ ಪೂರ್ಣಹುತಿಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾಮಾನ್ಯವಾಗಿ ಕೋಟಿ ಚೆನ್ನಯ್ಯರ ಗರಡಿಗಳು ಹಿಂದುಳಿದ ವರ್ಗದವರು ಹಾಗೂ ಎಲ್ಲಾ ಸಮುದಾಯದವರು ಒಟ್ಟಾಗಿ ಒಂದಾಗಿ ಆರಾಧಿಸಿ ಪೂಜಿಸುವಂತಹ ಸ್ಥಳವಾಗಿದೆ. ಇದು ನಮ್ಮೆಲ್ಲರಿಗೂ ಆತ್ಮಸ್ಥೈರ್ಯ ಕೊಡುವಂತಹ ಕೇಂದ್ರಗಳಾಗಿದ್ದು, ಕೋಟಿ ಚೆನ್ನಯ್ಯರ ಆದರ್ಶಗಳು ಮುಂದಿನ ಪೀಳಿಗೆಗೂ ಹಸ್ತಾಂತರಿಸುವ ಕಾರ್ಯವಾಗಬೇಕಿದೆ. ಎಲ್ಲರೂ ಒಗ್ಗಟ್ಟಿನಿಂದ ಅವರವರ ಯಥಾನುಸಾರ ಸೇವೆ, ದೇಣಿಗೆ ನೀಡುವ ಮೂಲಕ ಅದ್ಭುತವಾದ ಹಾಗೂ ಸಮಾಜವೇ ಹೆಮ್ಮೆ ಪಡುವಂತಹ ಗರಡಿಯನ್ನು ನಿರ್ಮಿಸಿದ್ದು, ಇಲ್ಲಿನ ಒಂದೊಂದು ಕಲ್ಲುಗಳು ಕೂಡ ಇತಿಹಾಸದ ಕಲ್ಪನೆಗಳನ್ನು ಸಮಾಜಕ್ಕೆ ಸಾರಿ ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರ್ಮಿಕ ಶ್ರದ್ಧೆಯಿಂದ ಮತ್ತು ಭಕ್ತರು ತಮ್ಮ ಭಾವನೆಗಳ ಮೂಲಕ ನಿರ್ಮಿಸಿದಂತಹ ಅಪರೂಪದ ಘಟನೆಗಳಲ್ಲಿ ಬೈಂದೂರಿನ ಈ ಗರಡಿ ಸಾಕ್ಷಿಯಾಗಿದೆ. ಜೀರ್ಣೋದ್ದಾರದ ಕಾರ್ಯಕ್ರಮದಲ್ಲಿ ಸರ್ಕಾರದ ಪರವಾಗಿ ಭಾಗವಹಿಸಲು ತುಂಬಾ ಹೆಮ್ಮೆ ಹಾಗೂ ಅಭಿಮಾನವಿದೆ. ಈ ಧಾರ್ಮಿಕ ಕೇಂದ್ರ ಒಂದು ಮಾರ್ಗಸೂಚಿಯಾಗಿ ಸಮಾಜಕ್ಕೆ ಬೆಳಕನ್ನು ನೀಡುವಂತಾಗಲಿ ಎಂದು ಹಾರೈಸಿದರು.    

  

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ, ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷರಾದ ಸಸಿಹಿತ್ಲು ವೆಂಕಟ ಪೂಜಾರಿ, ಮಂಜುನಾಥ ಪೂಜಾರಿ ಗರಡಿಮನೆ ಮೇಲ್ಹಿತ್ಲು, ಪ್ರಧಾನ ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ ಹಾಗೂ ಸಮಿತಿಯ ಸದಸ್ಯರು, ಗ್ರಾಮಸ್ಥರು ಇದ್ದರು.