ಉದ್ಯೋಗ ಖಾತರಿ ಯೋಜನೆಯಿಂದ ರೈತರು, ಕೂಲಿಕಾರರಿಗೆ ನೆರವು: ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ

 ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ರೈತರು, ಕೂಲಿಕಾರರು ದುಡಿಮೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರು. ಆಗ ಅವರ ಕೈಹಿಡಿದದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. 



ಉಡುಪಿ ಜಿಲ್ಲಾ ಪಂಚಾಯಿತಿ ಮತ್ತು ಬೈಂದೂರು ತಾಲ್ಲೂಕು ಪಂಚಾಯಿತಿ ಆಯೋಜಿಸಿರುವ ’ಮನೆಮನೆಗೆ ಉದ್ಯೋಗ ಖಾತರಿ ವಿಶೇಷ ಅಭಿಯಾನ ರಥ’ಕ್ಕೆ ಬಿ. ಎಂ. ಸುಕುಮಾರ ಶೆಟ್ಟಿ ಗುರುವಾರ ಮರವಂತೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಚಾಲನೆ ನೀಡಿ ಸಂಬಂಧಿಸಿದ ಮಾಹಿತ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೊರೊನಾ ಹಿಂದೆ ಸರಿಯಿತು ಎಂದುಕೊಂಡ ಜನರು ದುಡಿಮೆಗೆ ಮುಂದಾಗುತ್ತಿದ್ದಂತೆ ಇದೀಗ ಕೋವಿಡ್ ಮೂರನೆ ಅಲೆ ಎಲ್ಲರನ್ನು ಹೈರಾಣಗೊಳಿಸುತ್ತಿದೆ. ಈಗ ಉದ್ಯೋಗ ಖಾತರಿ ಯೋಜನೆಯ ಮಾಹಿತಿಯನ್ನು ಮನೆಮನೆಗೆ ತಲುಪಿಸಿ ದುಡಿಯುವ ವರ್ಗವನ್ನು ಗರಿಷ್ಠ ಪ್ರಮಾಣದಲ್ಲಿ ಇದರಲ್ಲಿ ತೊಡಗಿಸುವ ಅಗತ್ಯವಿದೆ. ಆಡಳಿತದ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು. 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಂಜುನಾಥ ಶೆಟ್ಟಿ ಸ್ವಾಗತಿಸಿ, ಅಭಿಯಾನದ ರಥವು ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಜನರಿಗೆ ಯೋಜನೆಯ ವಿಸ್ತೃತ ಮಾಹಿತಿ ನೀಡಲಿದೆ. ಇದರಿಂದ ಅಧಿಕ ಜನರು ಇದರ ಲಾಭ ಪಡೆಯುವರು ಎಂದು ಹೇಳಿದರು. 

ಶಾಸಕರು ಇದೇ ವೇಳೆ ಯೋಜನೆಯ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಿದರು. ಮರವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್ ವಂದಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ ಎಸ್, ಮರವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಲೋಕೇಶ ಖಾರ್ವಿ, ಸದಸ್ಯರು, ಸಿಬ್ಬಂದಿ, ತಾಂತ್ರಿಕ ಅಧಿಕಾರಿ ಶ್ರೀಕುಮಾರ್ ಇದ್ದರು.