ಕೊಲ್ಲೂರು, ಕುಂಭಾಶಿ ದೇವಾಲಯಗಳಿಗೆ ನಟ ಯಶ್ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕನ್ನಡ ಚಿತ್ರರಂಗದ ಖ್ಯಾತ ನಟ, ರಾಕಿಂಗ್ ಸ್ಟಾರ್ ಯಶ್ ಅವರು ಮಂಗಳವಾರ ಕುಂದಾಪುರ ತಾಲೂಕಿನ ಕೊಲ್ಲೂರು ಹಾಗೂ ಕುಂಭಾಶಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 
ಇಂದು ಬೆಳಗ್ಗೆ ಯಶ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಈ ಸಂದರ್ಭ ದೇವಸ್ಥಾನದ ವತಿಯಿಂದ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು ಮೊದಲಾದವರು ಜೊತೆಗಿದ್ದರು.

ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಬಸ್ರೂರಿನ ಸ್ಟುಡಿಯೋದಲ್ಲಿ ಕೆಜಿಎಫ್-2ಗೆ ಅಂತಿಮ ಟಚ್ ಮ್ಯೂಸಿಕ್ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ಯಶ್ ಅವರು ಇಲ್ಲಿಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ರವಿ ಬಸ್ರೂರು ಅವರ ಮನೆ ಬಳಿಯ ಆಟದ ಮೈದಾನದಲ್ಲಿ ಯಶ್ ಹುಡುಗರೊಂದಿಗೆ ಕೆಲ ಹೊತ್ತು ಕ್ರಿಕೆಟ್ ಆಡಿ ಕಾಲ ಕಳೆದಿದ್ದಾರೆ.