ತೆಕ್ಕಟ್ಟೆ ಪದವಿಪೂರ್ವ ಕಾಲೇಜಿನಲ್ಲಿ ನವೀಕೃತ ಪ್ರಯೋಗಾಲಯ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಕೆನರಾ ಬ್ಯಾಂಕ್ ಸಂಸ್ಥಾಪಕರಾದ ದಿ.ಅಮ್ಮಂಬಾಳ ಸುಬ್ಬರಾವ್ ಪೈಯವರ ಸಮಾಜದ ಏಳ್ಗೆಯ ಬಗ್ಗೆ ಅವರಿಗಿದ್ದ ಕಳಕಳಿ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಇವರ ಸೇವೆ ನಮಗೆಲ್ಲ ದಾರಿ ದೀಪವಾಗಬೇಕು. ಇಂತಹ ವ್ಯಕ್ತಿಯ ಮೂಲಕ ಸ್ಥಾಪಿಸಲ್ಪಟ್ಟ ಕೆನರಾ ಬ್ಯಾಂಕಿನ ಅಧಿಕಾರಿಗಳ ಸಂಘಟನೆಯ ಮೂಲಕ ಈ ಸಂಸ್ಥೆಗೆ ಉತ್ತಮವಾದ ಪ್ರಯೋಗಲಾಯವನ್ನು ಕೊಡುಗೆಯಾಗಿ ನೀಡಿದೆ. ಈ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಮೂಡಿಬರಬೇಕು ಎಂದು ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿಗಳ ಸಂಘಟನೆ ಅಧ್ಯಕ್ಷ ನಾಗರಾಜ್ ಹೇಳಿದರು.


ಅವರು ತೆಕ್ಕಟ್ಟೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿಗಳ ಸಂಘಟನೆ ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ೭೭.೧೦೦ ರೂಪಾಯಿಗಳಷ್ಟು ಧನ ಸಹಾಯದಿಂದ ನೀಡಲಾದ ನವೀಕರಣಗೊಂಡ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮಲ್ಯಾಡಿ ಶಿವರಾಮ್ ಶೆಟ್ಟಿ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಉಡುಪಿ ಜಿಲ್ಲಾ ಸಂಘಟನೆಯ ಜತೆ ಕಾರ್ಯದರ್ಶಿ ಯೋಗೀಶ್ ಭಟ್, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಮಾಯಾ, ಕಾಲೇಜಿನ ಉಪನ್ಯಾಸಕ ಬಳಗ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ಕೆನರಾ ಬ್ಯಾಂಕಿನ ಸಂಸ್ಥಾಪಕರ ದಿನದ ಸ್ಮರಣಾರ್ಥ ದಿ.ಅಮ್ಮಂಬಾಳ ಸುಬ್ಬರಾವ್ ಪೈಯವರ ಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಲಾಯಿತು. ಸಂಘಟನೆಯ ಅಧ್ಯಕ್ಷರು ಸಂಸ್ಥೆಯ ಮುಖ್ಯಸ್ಥರಿಗೆ ಚೆಕ್ ಹಸ್ತಾಂತರಿಸಿ ಶುಭ ಹಾರೈಸಿದರು.
ಉಪನ್ಯಾಸಕ ಕೆ. ಕೇಶವ ಸ್ವಾಗತಿಸಿದರು. ಸಂಘಟನೆಯ ಪದಾಧಿಕಾರಿ ಮಾರುತಿ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಶಾರದಾ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.