ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮಸ್ಯೆ: ಮನೋವೈದ್ಯ ಡಾ. ಪಿ. ವಿ. ಭಂಡಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಹಾರ ಪದ್ಧತಿ, ಅತಿಯಾದ ಮೊಬೈಲ್ ಬಳಕೆಯ ಕಾರಣದಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿದೆ ಎಂದು ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿಯವರು ಹೇಳಿದರು. 

ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ಮಾತನಾಡಿ ದುರ್ಬಲ ಮನಸ್ಸಿನ ಮಕ್ಕಳ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು. ಇಂತಹ ವಿದ್ಯಾರ್ಥಿಗಳನ್ನು  ತರಗತಿಯಲ್ಲಿ ಸಾಮೂಹಿಕವಾಗಿ ವಿಚಾರಿಸುವುದಕ್ಕಿಂತ  ಸಾಧ್ಯವಾದಷ್ಟು ಪ್ರತ್ಯೇಕವಾಗಿ ವಿಚಾರಣೆ ಅತಿ ಅವಶ್ಯಕ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಉಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಕಾಲೇಜಿನಲ್ಲಿ ಆಯೋಜಿಸುತ್ತಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಅನೇಕ ಸೌಲಭ್ಯಗಳ ಕುರಿತಾಗಿ ಸವಿಸ್ತಾರವಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಡಾ.ಪಿ.ವಿ. ಭಂಡಾರಿಯವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ವಕೀಲರಾದ ಕೆ. ರಾಜಾರಾಮ್ ಶೆಟ್ಟಿ ರಕ್ಷಕ ಶಿಕ್ಷಕ ಸಂಘದ ಸಹ ಕಾರ್ಯದರ್ಶಿಯಾದ ಲಕ್ಷ್ಮಿ ಸಿ. ನಾಯಕ್ ಉಪಸ್ಥಿತರಿದ್ದರು.ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಾಕರ್ ಪಾರಂಪಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಅವಿತಾ ಕೊರೆಯಾ ಅತಿಥಿಗಳನ್ನು ಸಭೆಗೆ ಪರಿಚಯಿಸಿ, ಉಪನ್ಯಾಸಕಿಯರಾದ ಚೈತ್ರಾ ವಂದಿಸಿ, ಕುಮಾರಿ ಅಮೃತಾ ಕಾರ್ಯಕ್ರಮ ನಿರೂಪಿಸಿದರು.