ನಿದ್ರೆ ಮಾತ್ರೆ ತಿನ್ನಿಸಿ ಕಾರಿಗೆ ಬೆಂಕಿ ಹಚ್ಚಿ ಕೊಲೆ. ನಾಲ್ವರು ವಶಕ್ಕೆ, ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಬೈಂದೂರು ಪೊಲೀಸರು



 ಕುಂದಾಪ್ರ ಡಾಟ್ ಕಾಂ ಸುದ್ದಿ.

ಬೈಂದೂರು,ಜು.14: ಇಲ್ಲಿನ ಹೇನುಬೇರು ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಸುಟ್ಟುಹೊದ ಸ್ಥಿತಿಯಲ್ಲಿ ಕಾರು ಹಾಗೂ ಅದರೊಳಕ್ಕೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರೆಗಾರ್ (52), ಹಿರ್ಗಾನ್ ಶೀವನಗರ ನಿವಾಸಿ ಶಿಲ್ಪಾ (30) ಹಾಗೂ ಕೃತ್ಯಕ್ಕೆ ಸಹಕರಿಸಿದ ಸೂಡಾ ಗ್ರಾಮದ ನಿತ್ಯಾನಂದ ದೇವಾಡಿಗ (40), ಸತೀಶ್ ಆರ್. ದೇವಾಡಿಗ (49) ಬಂಧಿತರು. ಈ ಪೈಕಿ ಸದಾನಂದ ಹಾಗೂ ಶಿಲ್ಪಾಳನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನದ ಪೊಲೀಸ್ ಕಸ್ಟಡಿ ನೀಡಲಾಗಿದೆ.


ಕ್ರೈಂಸ್ಟೋರಿ ನೋಡಿ ಕೊಲೆಗೆ ಸಂಚು:

ಕಾರ್ಕಳದಲ್ಲಿ ಖಾಸಗಿ ಸರ್ವೇಯರ್ ಆಗಿದ್ದ ಸದಾನಂದ ಶೇರೆಗಾರ್ ಜಾಗ ಹಾಗೂ ಹಣದ ವಿಚಾರದಲ್ಲಿನ ತನ್ನ ಅವ್ಯವಹಾರವನ್ನು ಮುಚ್ಚಿಹಾಕಲು, ಹಳೆಯ ಪ್ರಕರಣದ ಬಂಧನ ಭೀತಿ ತಪ್ಪಿಸಿಕೊಳ್ಳಲು, ಕ್ರೈಂ ಸ್ಟೋರಿ ನೋಡಿ ಅದರಂತೆ ತಾನೇ ಸತ್ತು ಹೋಗಿದ್ದೇನೆಂದು ಬಿಂಬಿಸುವ ಸಲುವಾಗಿ ಬೇರೊಬ್ಬ ವ್ಯಕ್ತಿಯನ್ನು ತನ್ನ ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿ ಕೊಲೆಗೈಯುವ ಪ್ಲಾನ್ ಸೃಷ್ಟಿಸಿದ್ದ. ಮೇ.12ರಂದು ತಾನು ಅಕ್ರಮ ಸಂಬಂಧ ಹೊಂದಿದ್ದ ಶಿಲ್ಪಾ ಪೂಜಾರಿಯೊಂದಿಗೆ ಸೇರಿ ಈ ಸಂಚು ಕಾರ್ಯರೂಪಕ್ಕೆ ತಂದಿದ್ದ. ಶಿಲ್ಪಾಳ ಸ್ನೇಹಿತ ಕಾರ್ಕಳದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಆನಂದ ದೇವಾಡಿಗ ಎಂಬುವವರನ್ನು ಮಂಗಳವಾರ ಮಧ್ಯಾಹ್ನದ ನಂತರ ಕಾರ್ಕಳದ ಬಾರೊಂದಕ್ಕೆ ಕರೆಯಿಸಿ ಕಂಠಪೂರ್ತಿ ಕುಡಿಸಿದ್ದರು. ರಾತ್ರಿಯಾಗುತ್ತಿದ್ದಂತೆ ಆತನನ್ನು ಪುಸಲಾಯಿಸಿ ವಯಾಗ್ರ ಮಾತ್ರೆ ಎಂದು ನಂಬಿಸಿ ನಿದ್ರೆ ಮಾತ್ರೆಯನ್ನು ನುಂಗಿಸಿ ಬೈಂದೂರಿನ ಕಡೆಗೆ ಬಂದಿದ್ದರು. ಮಂಗಳವಾರ ರಾತ್ರಿ 12.30ರ ಸುಮಾರಿಗೆ ಸಾಸ್ತಾನ ಟೋಲ್ ಗೇಟಿನಲ್ಲಿ ಬೈಂದೂರು ಕಡೆಗೆ ತೆರಳಿರುವುದು ದೃಡಪಟ್ಟಿದ್ದಲ್ಲದೇ, ಟೋಲ್ ಗೇಟಿನಲ್ಲಿ ಮಹಿಳೆಯೋರ್ವಳು ಕಾರಿನಿಂದ ಇಳಿದು ಟೋಲ್ ನೀಡಿರುವ ದೃಶ್ಯ ಸೆರೆಯಾಗಿತ್ತು. ಅಲ್ಲಿಂದ ಬೈಂದೂರು ಒತ್ತಿನಣೆ ಸಮೀಪ ಹೇನುಬೇರು ನಿರ್ಜನ ಪ್ರದೇಶವೆಂಬದು ಅರಿತು ಅಲ್ಲಿಯೇ ಕಾರು ತಂದು ನಿಲ್ಲಿಸಿದ್ದಾರೆ. ನಿದ್ರೆ ಮಾತ್ರೆಯ ಮಂಪರಿನಲ್ಲಿದ್ದ ವ್ಯಕ್ತಿ ಕಾರಿನ ಒಳಕ್ಕೆ ಇರುವಾಗಲೇ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲಿದ 

ಸದಾನಂದ ಶೇರೆಗಾರ ತನ್ನ ಸಂಬಂಧಿಯಾಗಿದ್ದ ನಿತ್ಯಾನಂದ ದೇವಾಡಿಗ, ಸತೀಶ್ ಆರ್. ದೇವಾಡಿಗ, ಎಂಬುವವರನ್ನು ಕರೆಯಿಸಿಕೊಂಡು ಎಲ್ಲರೂ ಬೇರೊಂದು ಕಾರಿನಲ್ಲಿ ಪರಾರಿಯಾಗಿದ್ದರು.


ನಂತರ ತಲೆಮರೆಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದ ಸದಾನಂದ ಹಾಗೂ ಶಿಲ್ಪಾ ಪೂಜಾರಿ, ಬಸ್ ಹಾಳಾಗಿದ್ದರಿಂದ ಮತ್ತೆ ಮೂಡುಬಿದಿರೆಗೆ ವಾಪಾಸಾಗಿದ್ದಾರೆ. ಅಲ್ಲಿಂದ ಕಾರ್ಕಳಕ್ಕೆ ಬೆಳಿಗ್ಗೆ ಬಸ್ಸಿನಲ್ಲಿ ಬರುತ್ತಿದ್ದ ಸಂದರ್ಭ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಸದಾನಂದನ ಸಂಬಂಧಿಗಳಾದ ನಿತ್ಯಾನಂದ ಹಾಗೂ ಸತೀಶನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.   ಕುಂದಾಪ್ರ ಡಾಟ್ ಕಾಂ ಸುದ್ದಿ.


ತನಿಕೆಯ ಜಾಡು ಹಿಡಿದು ಹೊರಟ ಬೈಂದೂರು ಪೊಲೀಸರು ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತನಿಕೆ ಮುಂದುವರಿಸಿದ್ದಾರೆ. ಅವರಿಗೆ ಸಹಕರಿಸಿದ್ದರು ಎನ್ನಲಾದ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಪೊಲೀಸರು:

ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ವ್ಯಕ್ತಿಯನ್ನು ಬೆಂಕಿ ಹಚ್ಚಿ ಕೊಲೆಗೈದ ಪ್ರಕರಣದ ಬೆಳಕಿಗೆ ಬರುತ್ತಿದ್ದಂತೆ ಬೈಂದೂರಿನ ನಾಗರಿಕರು ಆತಂಕಕ್ಕೆ ಒಳಗಾಗಿದ್ದರು. ಪ್ರಕರಣದ ಬೆನ್ನತ್ತಿದ ಬೈಂದೂರು ಪೊಲೀಸರು ಒಂದೇ ದಿನದಲ್ಲಿ ಆರೋಪಿಗಳನ್ನು ಬೆನ್ನತ್ತಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಎಸ್ಪಿ ವಿಷ್ಣುವರ್ದನ್ ಅವ ಮಾರ್ಗದರ್ಶನದಲ್ಲಿ, ಎಎಸ್ಪಿ ಸಿದ್ಧಲಿಂಗಯ್ಯ ಹಾಗೂ ಡಿವೈಎಸ್ಪಿ ಶ್ರೀಕಾಂತ್ ಕೆ. ಅವರ ನಿರ್ದೇಶನದಲ್ಲಿ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ ನೇತೃತ್ವದಲ್ಲಿ ಬೈಂದೂರು ಪಿಎಸ್ಐ ಪವನ್ ನಾಯಕ್ ಗಂಗೊಳ್ಳಿ ಪಿಎಸ್ಐ ವಿನಯ ಕೊರ್ಲಹಳ್ಳಿ, ಪೊಲೀಸ್ ಕಾನ್ಸ್ಟೇಬಲ್ಗಳಾದ ನಾಗೇಂದ್ರ, ಮೋಹನ, ಕೃಷ್ಣ, ಶ್ರೀಧರ, ಪ್ರಿನ್ಸ್, ಚಂದ್ರ ಗಂಗೊಳ್ಳಿ, ಚಾಲಕ ಚಂದ್ರಶೇಖರ್, ಸುಜಿತ್, ಶ್ರೀನಿವಾಸ್, ಶಾಂತರಾಮ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.