ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ 12 ಉಚಿತ ಹೊಲಿಗೆಯಂತ್ರ ಕೊಡುಗೆ


ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೆಣ್ಣುಮಕ್ಕಳನ್ನು ಸಬಲರನ್ನಾಗಿಸುವ ಜತೆಗೆ ಪೋಷಕರನ್ನು ಜಾಗೃತಗೊಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಕುಟುಂಬದ ಕೇಂದ್ರ ಬಿಂದುವಾಗಿರುವ ಮಹಿಳೆಗೆ ಸ್ಥಾನ-ಮಾನ, ಗೌರವದ ಜತೆಗೆ ಪೂಜ್ಯ ಭಾವನೆಯಿಂದ ಕಾಣುವ ಸಂಸ್ಕೃತಿ ನಮ್ಮ ನಮ್ಮದು. ಇಂತಹ ಪರಂಪರೆ ವಿಶ್ವದ ಯಾವುದೇ ರಾಷ್ಟ್ರಗಳಲ್ಲಿಲ್ಲ ಎಂದು ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಗೀತಾಂಜಲಿ ಸುವರ್ಣ ಹೇಳಿದರು.

ರಾಜ್ಯ ಟೈಲರ‍್ಸ್ ಅಸೋಸಿಯೇಶನ್, ಕೆಎಸ್‌ಟಿಎ ಬೈಂದೂರು ಕ್ಷೇತ್ರ ಸಮಿತಿ ಮತ್ತು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಉಪ್ಪುಂದ ದೇವಕಿ ಸಭಾಭವನದಲ್ಲಿ ಗುರುವಾರ ಮಹಿಳಾ ದಿನಾಚರಣೆ ಹಾಗೂ ಟೈಲರ‍್ಸ್ ಡೇ ಪ್ರಯುಕ್ತ ಹನ್ನೆರಡು ಅಶಕ್ತ ಟೈಲರ್‌ಗಳಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ಕೊಡಮಾಡಿದ ಹೊಲಿಗೆಯಂತ್ರಗಳನ್ನು ವಿತರಿಸಿ ಮಾತನಾಡಿದರು. ಒಬ್ಬರಿಂದಾಗದ ಕೆಲಸ ಸಂಘಟನೆ ಮೂಲಕ ಮಾಡಬಹುದು. ಹೀಗಾಗಿ ವಲಯದ ಎಲ್ಲಾ ಸದಸ್ಯರ ಸಹಭಾಗಿತ್ವ ಹಾಗೂ ಜಾತಿ ಭೇಧ ಮರೆತು ಎಲ್ಲರೂ ಒಂದಾಗಿ ಬೆರೆತು ನಮ್ಮೊಳಗಿನ ಬಾಂಧವ್ಯ ಗಟ್ಟಿಗೊಳಿಸುವ ಸದುದ್ದೇಶದಿಂದ ಮುನ್ನೆಡಬೇಕು. ಸರ್ಕಾರಗಳು ಮಹಿಳೆಯರಿಗೆ ಉನ್ನತವಾದ ಸೌಕರ್ಯಗಳನ್ನು ನೀಡುವುದರ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಇದನ್ನುಸದುಪಯೋಗ ಪಡಿಸಿಕೊಳ್ಳಬೇಕು ಎಂದರು.  

ಕೆಎಸ್‌ಟಿಎ ಬೈಂದೂರು ಕ್ಷೇತ್ರ ಸಮಿತಿ ಅಧ್ಯಕ್ಷ ರಾಜು ಕೊಲ್ಲೂರು ಅಧ್ಯಕ್ಷವಹಿಸಿದ್ದರು. ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ, ಕೆಎಸ್‌ಟಿಎ ರಾಜ್ಯ ಸಮಿತಿ ಕೋಶಾಧಿಕಾರಿ ರಾಮಚಂದ್ರ ಉಡುಪಿ, ಕೆಎಸ್‌ಟಿಎ ಜಿಲ್ಲಾ ಸಮಿತಿ ಅಧ್ಯಕ್ಷ ಗುರುರಾಜ ಶೆಟ್ಟಿ, ಉಡುಪಿ ಟೈಲರ‍್ಸ್ ಕೋ-ಆಪರೇಟೀವ್ ಸೊಸೈಟಿ ಅಧ್ಯಕ್ಷ ದಯಾನಂದ ಕೋಟ್ಯಾನ್, ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ರಾಘವೇಂದ್ರ, ಕೆಎಸ್‌ಟಿಎ ಕೊಲ್ಲೂರು ವಯಾಧ್ಯಕ್ಷೆ ಲಕ್ಷ್ಮೀದೇವಿ ಐತಾಳ್, ವಂಡ್ಸೆ ವಲಯಾಧ್ಯಕ್ಷ ನಾಗೇಂದ್ರ, ಶಿರೂರು ವಲಯಾಧ್ಯಕ್ಷೆ ಶಾರದಾ, ಗಂಗೊಳ್ಳಿ ವಲಯಾಧ್ಯಕ್ಷೆ ಜ್ಯೋತಿ ಗುಜ್ಜಾಡಿ, ಉಪ್ಪುಂದ ವಲಯಾಧ್ಯಕ್ಷೆ ಜ್ಯೋತಿ, ನಾವುಂದ ವಲಯಾಧ್ಯಕ್ಷೆ ಶಾರದಾ ಬೈಂದೂರು ವಲಯಾಧ್ಯಕ್ಷ ಮಹಾಬಲ ಮೊಗವೀರ ಉಪಸ್ಥಿತರಿದ್ದರು. ಕ್ಷೇತ್ರ ಸಮಿತಿ ಖಜಾಂಚಿ ಆಶಾ ದಿನೇಶ್ ಸ್ವಾಗತಿಸಿದರು. ಕೆಎಸ್‌ಟಿಎ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್‌ಕುಮಾರ್ ಪ್ರಾಸ್ತಾವಿಸಿದರು. ನಾಗರಾಜ ಪಿ. ಯಡ್ತರೆ ನಿರೂಪಿಸಿ, ರಾಜು ಯಡ್ತರೆ ವಂದಿಸಿದರು. ನಂತರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.