ಹಾರಾಡಿ ಶೈಲಿ ಕೊ೦ಡಿ ನರಾಡಿ ಭೋಜರಾಜ ಶೆಟ್ಟಿ

     ಬಡಗುತಿಟ್ಟು ಪರಂಪರೆಯ ಸಿದ್ದಿ ಹಾಗು ಪ್ರಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದರಲ್ಲಿ ನರಾಡಿ ಭೋಜರಾಜ ಶೆಟ್ಟರೂ ಒಬ್ಬರು. ಬಯಲಾಟ ರಂಗಸ್ಥಳದಲ್ಲಿ ಎರಡನೇ ವೇಷದಾರಿಗಳಾಗಿ ತಮ್ಮದೇ ಛಾಪನ್ನು ಮೂಡಿಸಿರುವ, ಐರೋಡಿ ಗೋವಿಂದಪ್ಪ, ಆಜ್ರಿ ಗೋಪಾಲ ಗಾಣಿಗ, ಕೋಡಿ ವಿಶ್ವನಾಥ ಗಾಣಿಗ, ಐರ್ ಬೈಲು ಆನಂದ ಶೆಟ್ಟಿ, ಆರ್ಗೋಡು ಮೋಹನದಾಸ ಶೆಣೈ, ಉಪ್ಪುಂದ ನಾಗೇಂದ್ರರವರ ಸಮಕಾಲೀನರಾದ ಇವರು ದೀರ್ಘಕಾಲದಿಂದ ಮಂದಾರ್ತಿ ಮೇಳದ ಎರಡನೆ ವೇಷಧಾರಿಯಾಗಿ ದುಡಿಯುತಿದ್ದಾರೆ. 
ಬಾಲ್ಯ ಮತ್ತು ಶಿಕ್ಷಣ

ಕುಂದಾಪುರ ತಾಲೂಕಿನ ಶಿರಿಯಾರ ಸಮೀಪ ನರಾಡಿ ಎ೦ಬ ಪುಟ್ಟ ಗ್ರಾಮದಲ್ಲಿ ಸುಬ್ಬಣ್ಣ ಶೆಟ್ಟಿ ಮತ್ತು ನರಸಮ್ಮ ದಂಪತಿಯ ಪುತ್ರನಾಗಿ 1959ರಲ್ಲಿ ಜನಿಸಿದ ಇವರು ಅಚ್ಲಾಡಿ ಮದುವನದಲ್ಲಿ ಪ್ರಾಥಮಿಕ ಅಬ್ಯಾಸ ಪಡೆದು ಪರಿಸರದಲ್ಲಿ ನೆಡೆಯುತ್ತಿರುವ ಯಕ್ಷಗಾನ ಆಟದಲ್ಲಿ ಆಸಕ್ತಿ ಕುದುರಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಸೇರಿಕೊಂಡು ಹೆಜ್ಜೆಗಾರಿಕೆ ಕಲಿತರು. ಉಪ್ಪೂರರ ಪ್ರೇರಣೆಯಂತೆ ತನ್ನ 16ನೇ ವಯಸ್ಸಿನಲ್ಲಿ ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆ ಕಟ್ಟಿದರು.

ವೃತ್ತಿ ಹಾಗೂ ಕಲಾಸೇವೆ
      ಶಿರಿಯಾರ ಮಂಜುನಾಯ್ಕರ ಹೂವಿನಕೋಲಿನಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಳ್ಳುತಿದ್ದ ಇವರು ಮಂಜುನಾಯ್ಕರು ಮತ್ತು ಕೋಟ ವೈಕುಂಠನವರಲ್ಲಿ ಮಾತುಗಾರಿಕೆ ಕಲಿತು, ಸಾಲಿಗ್ರಾಮ ಮೇಳದ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡರು. ಬಳಿಕ ಶಿರಸಿ, ಪೆರ್ಡೂರು, ಕಮಲಶಿಲೆ, ಸೌಕೂರು, ಮಾರಣಕಟ್ಟೆ ಮೇಳಗಳಲ್ಲಿ ಪುರುಷ ವೇಷಧಾರಿಯಾಗಿ ಸೇವೆ ಸಲ್ಲಿಸಿ ಕಳೆದ 18 ವರ್ಷದಿಂದ ಮಂದಾರ್ತಿ ಮೇಳದ ಪ್ರಧಾನ ಕಲಾವಿದರಾಗಿ ಸೇವೆ ಸಲ್ಲಿಸುತಿದ್ದಾರೆ. 

1994ರಲ್ಲಿ ಅಮೃತೇಶ್ವರಿ ಮೇಳದ ಸಂಚಾಲಕತ್ವವನ್ನು ವಹಿಸಿಕೊಂಡ ಇವರು ಯಜಮಾನಿಕೆಯ ಸಿಹಿಕಹಿಯನ್ನೂ ಉಂಡವರು. ಎರಡನೇ ವೇಷ ಹಾಗೂ ಪುರುಷವೇಷಗಳಿಗೆ ಸಮಾನ ನ್ಯಾಯ ಒದಗಿಸಬಲ್ಲ ಇವರ ಕರ್ಣಾರ್ಜುನ ಕರ್ಣ ಹಾಗೂ ಅರ್ಜುನ, ಬೀಷ್ಮ ವಿಜಯದ ಬೀಷ್ಮ ಹಾಗೂ ಪರಶುರಾಮ, ವೀರಮಣಿ ಕಾಳಗದ ವೀರಮಣಿ ಹಾಗೂ ಪುಷ್ಕಳ ಹೀಗೆ ಎರಡೂ ಪತ್ರಗಳನ್ನು ನಿರ್ವಹಿಸಬಲ್ಲ ಸಾಮರ್ಥ್ಯವಿದ್ದವರು. ಕೃಷ್ಣಾರ್ಜುನದ ಅರ್ಜುನ ಮತ್ತು ನಳದಮಯಂತಿಯ ಋತುಪರ್ಣ ಇವರಿಗೆ ವಿಶೇಷ ಕೀರ್ತಿಯನ್ನು ತಂದಿತ್ತ ಪಾತ್ರಗಳು. 

ಸುಂದರವಾದ‌ ಆಳಂಗ, ನೀಳಕಾಯ, ವಿಶಿಷ್ಟವಾದ ಶ್ರುತಿಬಧ್ಧತೆ. ಹಿತಮಿತವಾದ ಕುಣಿತ, ಪ್ರತ್ಯುತ್ಪನ್ನಮತಿತ್ವ, ಸಮರ್ಥವಾದ ಪದ್ಯದ ಎತ್ತುಗಡೆಯಿಂದ ಬಡಗಿನ ಹಿರಿಯ ಕಲಾವಿದರಾದ ಐರೋಡಿ ಗೋವಿಂದಪ್ಪ ಮತ್ತು ನಗರ ಜಗನ್ನಾಥ ಶೆಟ್ಟಿಯವರ ಉತ್ತರಾಧಿಕಾರಿಯಾಗಿ ಇವರನ್ನು ಗುರುತಿಸಬಹುದಾಗಿದೆ 

ದಿಗ್ಗಜರ ಒಡನಾಟ
   ನಾರ್ಣಪ್ಪ‌ ಉಪ್ಪೂರರು, ಮರಿಯಪ್ಪಾಚಾರ್, ಶಿರಿಯಾರ ಮಂಜುನಾಯ್ಕರು, ಕೋಟ ವೈಕುಂಠ, ಅರಾಟೆ ಮಂಜುನಾಥ, ದುರ್ಗಪ್ಪ ಗುಡಿಗಾರ್, ಚಿಟ್ಟಾಣಿ, ಜಲವಳ್ಳಿ, ನಗರ ಜಗನ್ನಾಠ ಶೆಟ್ಟಿ, ಹಳ್ಳಾಡಿ ಮಂಜಯ್ಯ ಶೆಟ್ಟಿ, ಗೋಡೆ ನಾರಾಯಣ ಹೆಗಡೆ ಮುಂತಾದ ಘಟಾನುಘಟಿಗಳೊಂದಿಗೆ ತಿರುಗಾಟ ಮಾಡಿದ ಇವರು ಅತೀ ಸಣ್ಣ ವಯಸ್ಸಿನಲ್ಲಿ ಎರಡನೇ ವೇಷದ ಪಟ್ಟವೇರಿದವರು. 

ಕುಟು೦ಬ ಹಾಗೂ ಪ್ರಶಸ್ತಿಗಳು
      ಸುದೀರ್ಘ ಕಾಲ 40 ವರ್ಷ ಕಲಾಸೇವೆ ಮಾಡಿ ಸದ್ಯ ಮಂದಾರ್ತಿ ಮೇಳದ ಕಲಾವಿದರಾಗಿರುವ ಇವರು ಪತ್ನಿ ಚಂದ್ರಾವತಿ, 3 ಮಕ್ಕಳೊಂದಿಗೆ ನರಾಡಿಯಲ್ಲಿ ವಾಸವಾಗಿದ್ದಾರೆ. ಶಿರಿಯಾರ ಮಂಜುನಾಯ್ಕರ ಕಟ್ಟಾ ಅಭಿಮಾನಿಯಾದ ಇವರಿಗೆ ಈ ಸಾಲಿನ ಶಿರಿಯಾರ ಪ್ರಶಸ್ತಿ ಯೋಗ್ಯವಾಗೀಯೇ ಸಂದಿದೆ. 
      ಬಡಗುತಿಟ್ಟಿನ ಹಿರಿಯ ಡೇರೆ ಮೇಳವಾದ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇದರಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ರಂಗಸ್ಥಳದಲ್ಲೇ ಕೀರ್ತಿಶೇಷರಾದ ಮೇರು ಕಲಾವಿದ ಶಿರಿಯಾರ ಮಂಜುನಾಯ್ಕರ ಸವಿನೆನಪಿಗಾಗಿ ಸಾಲಿಗ್ರಾಮ ಮೇಳದ ವ್ಯವಸ್ಥಾಪಕರು ಅವರ ಮೇಲಿನ ಅಭಿಮಾನದಿಂದ ಪ್ರತೀವರ್ಷ ನೀಡುವ ಈ ಸಾಲಿನ ``ಶಿರಿಯಾರ ಪ್ರಶಸ್ತಿ`` ಶ್ರೀಯುತರಿಗೆ ಯೋಗ್ಯವಾಗೀಯೇ ಸಂದಿದೆ 

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com