ಹೌಂದೇರಾಯನ ಓಲಗ: ಫಲ -ಸಮೃದ್ಧಿಗಾಗಿ ಕುಂದಗನ್ನಡದ ವಿಶಿಷ್ಟ ಜಾನಪದ ನೃತ್ಯ ಆಚರಣೆ

ಸ್ವಾಮಿಗಿಂದು ವಾಲ್ಗುವೆ...ತಾಯಿ ತುಳುಸಿ ವಾಲ್ಗುವೆ.. ಸರ್ವದೇವರಿಗೆ ವಾಲ್ಗುವೇ..
     ಹೌಂದೇರಾಯನ ಕುಣಿತವು ಮೂಲತಃ ತುಳಸಿ ಪೂಜೆಯ ಸಂದರ್ಭದಲ್ಲಿ ದೇವತಾರಾಧನೆಯ ಭಾಗವಾಗಿ ಜನಪ್ರಿಯವಾದ ಜಾನಪದ ಕಲಾ ಪ್ರಕಾರ. ಉಡುಪಿ ಜಿಲ್ಲೆಯ ಕುಂದಾಪುರ ಕರಾವಳಿ ಪ್ರದೇಶದಲ್ಲಿ ಈ ನೃತ್ಯಾರಾಧನೆ ಹೆಚ್ಚು ಪ್ರಸಿದ್ಧ. ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ ಈ ಕಲಾ ಪ್ರಕಾರವು ಇತ್ತೀಚಿನ ದಿನಗಳಲ್ಲಿ ವೇಗವಾಗಿ ನಶಿಸಿ, ಅವಸಾನದ ಅಂಚಿನಲ್ಲಿದೆ.
     ಕಡಲ ಮಕ್ಕಳ ಒಡಲಾಳ ಭಕ್ತಿ, ಆರಾಧನೆ, ಸಮರ್ಪಣೆ ಮತ್ತು ಸದಾಶಯಗಳ ಮಾರ್ದವ ಮಿಶ್ರಣವೇ ಈ ಜಾನಪದ ನೃತ್ಯ- ಗೀತೆಯ ತಿರುಳು. ಕಾಲಿಗೆ ಗೆಜ್ಜೆ ಕಟ್ಟಿ ಲಯಬದ್ದವಾಗಿ ಹೆಜ್ಜೆ ಹಾಕುತ್ತಾ, ಭಾವಪರವಶರಾಗಿ ಹಾಡುತ್ತಾ ಬಾವುಕ ಸನ್ನಿವೇಶಗಳನ್ನು ಸೃಷ್ಥಿಸುವುದು ಅಪೂರ್ವ ಕಲಾವಂತಿಗೆ ಇದರಲ್ಲಿ ಅಡಗಿದೆ. ಹಿನ್ನಲೆ ಗಾಯನ ಮತ್ತು ವಾದ್ಯವೃಂದವಿಲ್ಲದೆ ಕುಂದಾಪುರ ಕನ್ನಡ ದ ಆಡುಮಾತಿನ ಸೊಗಡಿನೊಂದಿಗೆ ತಾವೇ ಹಾಡುತ್ತಾ ಕುಣಿಯುವುದೇ ಈ ನೃತ್ಯದ  ವಿಶೇಷತೆ.

ಹೌಂದೇರಾಯನ ಓಲಗದ ಹಿನ್ನಲೆ:
        ಹೌಂದೇರಾಯ ಎಂಬ ತುಂಡರಸನು ಪ್ರಾಚೀನ ಜೈನ ರಾಜರಿಗೆ ಸಾಮಂತನಾಗಿ ಬಾರಕೂರು ಸಂಸ್ಥಾನವನ್ನು ಆಳುತ್ತಿದ್ದ ಎಂದ ಐತಿಹ್ಯವಿದೆ. ಜನಪರ ಆಡಳಿತದೊಂದಿಗೆ ಸದಾ ಕಲಾಪ್ರಿಯನಾಗಿದ್ದ ಹಾಗೂ ಆತನಿಗೆ ಹೊಗಳಿಕೆ ಎಂದರೆ ಇಷ್ಟವಾಗುತ್ತಿತ್ತು. ಮೊದಮೊದಲು ಹೊಗಳಿಕೆಯು ಕೇವಲ ಆಡುಮಾತಿಗೆ ಸೀಮಿತವಾಗಿತ್ತು. ಹೊಗಳು ಭಟರು ಹಾಡು ಮತ್ತು ಕುಣಿತಗಳಿಂದ ರಾಜನನ್ನು ಹೆಚ್ಚು ಸಂತೋಷ ಪಡಿಸಬಹುದು ಎಂಬ ದೃಷ್ಠಿಯಿಂದ ಯುಶಕ್ತಿಗಳು ನೃತ್ಯ ಮತ್ತು ಹಾಡಿನಲ್ಲಿ ಇನ್ನಷ್ಟು ಆರ್ಭಟ ತೋರಿಸಿದರು. ರಾಜನಿಗೆ ಮೆಚ್ಚಿಗೆಯಾಗಿ ಅದನ್ನು ಕಡ್ಡಾಯಗೊಳಿಸಿದನು. ಈ ಹೊಗಳಿಕೆ ಹಾಡು-ನೃತ್ಯ ಪ್ರಕಾರವನ್ನು ಮುಂದುವರಿಸಬೇಕೆ? ಮುಂದುವರಿಸಬಹುದಾದರೆ ಯಾರ ಹೆಸರಿನಲ್ಲಿ ಹೊಗಳಿಕೆ ಇರಬೇಕು ಎಂಬ ಜಿಜ್ಞಾಸೆ ಜನರಲ್ಲಿ ಚರ್ಚಿತವಾಯಿತು. ನಾವು ರಾಜನನ್ನು ದೇವರಂತೆ ಕಾಣುತ್ತಿದ್ದೇವೆ ಆದ್ದರಿಂದ ಹೌಂದೇರಾಯನ ಹೆಸರಿನಲ್ಲಿ ನಾವು ದೇವರನ್ನು ಹೊಗಳೋಣ ಎಂದು ಹಿರಿಯರು ತಿರ್ಮಾನಿಸಿದರು.

ಸಮುದ್ರರಾಯನ ಓಲಗ:
   ಉಡುಪಿಯಿಂದ ಉತ್ತರಕ್ಕೆ ಕಡಲ ಭಾಗದ ಜನ ಆಚರಿಸುವ ಒಂದು ಆಚರಣೆಯಾಗಿದ್ದು, ಕಡಲ ತೀರದ ಜನರು ಈ ಆಚರಣೆಯನ್ನು `ಸಮುದ್ರ ರಾಯನ ಓಲಗ' `ಗೋವಿಂದ ರಾಯನ ಓಲಗ' ಎಂದು ಕರೆಯುತ್ತಾರೆ. ಫಲ ಸಮೃದ್ಧಿಗಾಗಿ ಪುರುಷರಿಂದ ಮಾತ್ರವೇ ನಡೆಯುವ ಕುಣಿತ ಇದಾಗಿದ್ದು, ಇಲ್ಲಿನ ಜನರ ಆಚರಣೆಯ ಪ್ರಕಾರ ಐದು ಪ್ರಕಾರದ ಕುಣಿತಗಳಿವೆ. ಕುಂದಾಪುರ, ಅಂಪಾರು ಭಾಗಗಳಲ್ಲಿ ಆಳ್ವಿಕೆ ನಡೆಸುತ್ತಿದ್ದ ನಂದೂರಾಯನೆಂಬ ಒರ್ವ ದೊರೆಯ ಭಂಡಾರವೆಲ್ಲ ಒಮ್ಮೆ ದಿವಾಳಿಯಾಗಿ ಹೋದಾಗ ಆತನ ಮಂತ್ರಿ ಹೌಂದೇರಾಯನು ಪುನಃ ತುಂಬಿಸಿಕೊಟ್ಟನೆಂಬ ಸ್ಮರಣಾರ್ಥವಾಗಿ ಸಮೃದ್ಧಿ ತುಂಬುವ ಕುಣಿತವಾಗಿ ಇದು ಸಂಪ್ರದಾಯದಲ್ಲಿದೆ. ಈ ರೀತಿ ಸಂಪ್ರದಾಯಬದ್ದವಾದ ಕುಣಿತವನ್ನು ಬೀಜಾಡಿ ಮತ್ತು ಅಂಪಾರಿನ ತಂಡದವರು ಹಾಗೂ ಮೀನುಗಾರರು ಈಗಲೂ  ಹಬ್ಬ ಹರಿದಿನಗಳಲ್ಲಿ ಆಚರಿಸಿಕೊಂಡು ಬಂದಿದ್ದಾರೆ.
ಅಂದಿನ ಆ ದೃಡ ನಿಧರ್ಾರದಂತೆ ಈ ಇಪ್ಪತ್ತೊಂದನೆ ಶತಮಾನದಲ್ಲಿ ನೃತ್ಯ ಪ್ರಕಾರವನ್ನು ಉಳಿಸಲು ಉಡುಪಿ ತಾಲೂಕಿನ ಸಾಲಿಗ್ರಾಮ ಶ್ರೀ ಗುರುಮಾರುತಿ ಹೌಂದೇರಾಯನ ಜಾನಪದ ನೃತ್ಯ ತಂಡ ಎರಡೂವರೆ ದಶಕಗಳಿಂದ ಹಾಗೂ ರಾಜ್ಯಾದ್ಯಂತ ನಾಡ ಉತ್ಸವ, ಜಾನಪದ ಜಾತ್ರೆ, ಸಾಹಿತ್ಯ ಸಮ್ಮೇಳನ ಹಾಗೂ ಉಡುಪಿ ಅಷ್ಠ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದೆ. ಹೊರರಾಜ್ಯಗಳಲ್ಲಿಯೂ ಪ್ರದರ್ಶನ ನೀಡಿ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.

   ಸ್ವಾಮಿಗಿಂದು ವಾಲ್ಗುವೆ...ತಾಯಿ ತುಳುಸಿ ವಾಲ್ಗುವೆ.. ಸರ್ವದೇವರಿಗೆ ವಾಲ್ಗುವೇ..ಸರ್ವ ಅಮ್ಮನವರಿಗೆ ವಾಲ್ಗುವೆ..ಗಿರಿಗಳಗೆಲ್ಲ ವಾಲ್ಗುವೆ..ಮುನಿಗಳಿಗೆಲ್ಲ ವಾಲ್ಗುವೆ..ಸಕಲ ಅವತಾರಕ್ಕೆ ವಾಲ್ಗುವೆ.. ಹೀಗೆ ಆರಂಭವಾಗುವ
ಹೌಂದೇರಾಯನ ನೃತ್ಯ ಪ್ರಕಾರಗಳಲ್ಲಿ ಆರು ಭಾಗಗಳಿವೆ.

1.ಓಲಗ ಸಂಧಿ: ಯಾರ ಮನೆಯಲ್ಲಿ ಹೌಂದೇರಾಯನ ಓಲಗದ ಸೇವೆಯನ್ನು ನಡೆಸುತ್ತಾರೋ ಆ ಮನೆಯ ಯಜಮಾನನ ಹೆಸರಿನಲ್ಲಿ  ಈ ಹರಕೆ ಸೇವೆ ಕಥೆಯೊಂದಿದೆ ಪ್ರಾರಂಬಿಸಲಾಗುವುದು.
2.ಬ್ಯಾಂಟಿ ಸಂಧಿ: ರಾಜನ ಆಳ್ವಿಕೆ ಕಾಲದಲ್ಲಿ ಪ್ರಜೆಗಳ ಬೆಳೆ,ಆಸ್ತಿ, ಮತ್ತು ಜೀವ ಹಾನಿ ಮಾಡುವ ಕಾಡು ಮೃಗಗಳನ್ನು ಬೇಟೆಯಾಡುವುದನ್ನು, ಬೇಟೆಯಲ್ಲಿ ಸಹಕರಿಸಿದವರಿಗೆ ಮಾಂಸವನ್ನು ಹಂಚುವುದನ್ನು ಮೈನವಿರೇಳುವಂತೆ ಹಾಡುವುದು.
3.ಕೋಡಂಗಿ ಸಂಧಿ: ಇದು ಹನುಮಂತ ದೇವರ ಹೊಗಳಿಕೆಯ ಹಾಡು.  ಆಂಜನೆಯನನ್ನು ಸಲುಗೆಯಿಂದ ಕೋಡಂಗಿ ಎಂದು ಕರೆದು ಅವನಿಗಾಗಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಅಣಕಿಸುತ್ತಾ, ರೇಗಿಸುತ್ತಾ ಹಾಗೇ ಪೂಜಿಸಿ, ಹೊಗಳಿಕೆಯಿಂದ ಉಬ್ಬಿಸಿ ಸಂತೈಸುವುದು ನಂತರ ತಂಡದ ಹಿರಿಯರನ್ನು ಕೊಡಂಗಿ ( ಹನುಮಂತ)ನನ್ನು ಆವಾಹಿಸಿ ತೃಪ್ತಿ ಪಡಿಸುವುದಾಗಿದೆ.
4.ಶಿವರಾಯ ಸಂಧಿ: ಶಿವನನ್ನು ಸ್ತುತಿಸುತ್ತಾ ಹರಿ-ಹರರು ಒಂದೇ ಎಂದು ಸಾರುತ್ತಾ ಶಿವ ಮತ್ತು ರಾಮನನ್ನು ಹೊಗಳುವುದು.
5. ಕೋಲಾಟ ಸಂಧಿ: ಶ್ರೀ ಕೃಷ್ಣನ ಲೀಲೆಯನ್ನು ಕೊಂಡಾಡುತ್ತಾ ಕೋಲಾಟದ ಹೆಜ್ಜೆಯೊಂದಿದೆ ಭಕ್ತಿ ಪರಾಕಾಷ್ಠೆಯ ವಾತಾವರಣವನ್ನು ನಿರ್ಮಿಸುವುದು.
6.ಅರ್ಪಿತ ಸಂಧಿ: ಈ ತನಕ ನೃತ್ಯ ಹಾಡುಗಳಿಂದ ನಡೆಸಿದ ಸೇವೆಗಳೆಲ್ಲವೂ ನಿಮಗೆ ಅರ್ಪಿತ ಎಂದು ಹಾಡುತ್ತಾ ವಂದಿಸುವುದು.