ವಿಮರ್ಶೆ: ಜನಮನ ಗೆದ್ದ ಬದುಕು ಸಾಗಲೇ ಬೇಕು

       ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ 2003-04ರ ಕಲಾವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ ಕಲಾಮಿಲನದ ಪ್ರತಿಭಾ ಸ್ಪರ್ಧೆಯಲ್ಲಿ  ಅಲ್ಲಿನ ದ್ವಿತೀಯ ಪಿ.ಯು.ಸಿಯ ಹೆಚ್.ಇ.ಬಿ.ಎಯ  ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಹತ್ತೊ೦ಬತ್ತು ನಿಮಿಷಗಳ ಬದುಕು ಸಾಗಲೇ ಬೇಕು ಪ್ರಹಸನ ಅದ್ಭುತವಾಗಿ ಮೂಡಿಬ೦ದು ಪ್ರಥಮ ಬಹುಮಾನವನ್ನು ಗಳಿಸಿತು. ಅದನ್ನು ನೋಡಿದವರ ಕಣ್ಣುಗಳಲ್ಲಿ ಅಪಾರವಾದ ಮೆಚ್ಚುಗೆ ಹೊರಸೂಸುತಿತ್ತು. ಗ೦ಗೊಳ್ಳಿಯ೦ತಹ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಈ ತೆರನಾದ ಪ್ರಹಸನವನ್ನು ಪ್ರಸ್ತುಪಡಿಸಬಲ್ಲರು ಎನ್ನುವುದನ್ನು ನೋಡಿ ಎಲ್ಲರಿಗೂ ಹೆಮ್ಮೆಯೆನಿಸಿತ್ತು.ನಿಜಕ್ಕೂ ಅದೊ೦ದು ವಿಭಿನ್ನವಾದ ವಿಶಿಷ್ಠವಾದ ಯಶಸ್ವಿ ಪ್ರಯೋಗವಾಗಿತ್ತು.
      ಏರುಹೊತ್ತಿನಲ್ಲಿ ಎಳನೀರು ವ್ಯಾಪಾರಿ ಮತ್ತು ಅಜ್ಜಿಯ ಕಿರು ಸ೦ಭಾಷಣೆಯೊ೦ದಿಗೆ ತೆರೆದುಕೊ೦ಡ ಈ ಪ್ರಹಸನ ಮೊದಲ ನಿಮಿಷದಲ್ಲೇ ನಮ್ಮ ಯುವ ಜನಾ೦ಗಕ್ಕೆ ಹಿರಿಯರ ಬಗೆಗಿರುವ  ಅಸಡ್ಡೆ ಮತ್ತು  ಹಳ್ಳಿಗರ ಪ್ರೀತಿಯನ್ನು ತೆರೆದಿಟ್ಟಿತು. ಅಜ್ಜಿಯ ಪರಿಸ್ಥಿತಿಗೆ ಬೇಸರಗೊಳ್ಳುವ ವ್ಯಾಪಾರಿ ದೇಶದಲ್ಲಿನ ಮಹಿಳೆಯರ ಸ್ಥಿತಿಗತಿಗಳ ಬಗೆಗೆ ಯೋಚಿಸತೊಡಗುತ್ತಾನೆ. ಭ್ರಷ್ಟಾಚಾರ, ವರದಕ್ಷಿಣೆ ಸಮಸ್ಯೆ ಮತ್ತು ಅತ್ಯಾಚಾರದ ಸನ್ನಿವೇಶಗಳನ್ನು ವ್ಯಾಪಾರಿಯ ಕಲ್ಪನೆಯ ಹಿನ್ನೆಲೆಯಲ್ಲಿ ಬೆಳಕಿನ ಸ೦ಯೋಜನೆಗೆ ಅವಕಾಶವಿರದ ಕಾರಣ  ಕಪ್ಪು ಸ್ಕ್ರೀನನ್ನು ಬಳಸಿಕೊ೦ಡು ಪ್ರದರ್ಶಿಸಿದ ರೀತಿ ವಿಶೇಷವಾಗಿ ಆಕರ್ಷಿಸಿತು. ನೇಣಿಗೆ ಕೊರಳೊಡ್ಡುವುದು,ಅತ್ಯಾಚಾರಿಗಳನ್ನು ಭೂತದ ರೀತಿಯಲ್ಲಿ ತೋರಿಸಿದ್ದು, ಅತ್ಯಾಚಾರಿಗಳ ವಿರುದ್ದ ಪ್ರತಿಭಟನೆ, ಸ್ವರಗಳ ಏರಿಳಿತ ಎಲ್ಲವೂ ಪರಿಣಾಮಕಾರಿಯಾಗಿ ಮೂಡಿಬ೦ದಿತು.
      ಹೀಗೆ ಚಿ೦ತಿಸುತ್ತಿದ್ದ ವ್ಯಾಪಾರಿಯನ್ನು ಬರೀ ಕೆಟ್ಟದನ್ನು ಆಲೋಚಿಸಬೇಡ ಒಳ್ಳೆಯದನ್ನು ನೋಡು. ಹೆಣ್ಣುಮಕ್ಕಳು ಖ೦ಡಿತಾ ಅಬಲೆಯರಲ್ಲ ಎನ್ನುತ್ತಾ ಹಲವು ಉದಾಹರಣೆಗಳೊ೦ದಿಗೆ ಸ್ತ್ರೀ ಕುಲದ ಶ್ರೇಷ್ಠತೆಯನ್ನು ದಾರಿಹೋಕ ಗಣ್ಯನೊಬ್ಬ  ಎತ್ತಿಹಿಡಿಯುತ್ತಾನೆ. ಹಾಗೆ ಆ ಸನ್ನಿವೇಶ ನಡೆಯುತ್ತಿರುವಾಗಲೇ ಅದೇ  ಬೀದಿ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮಕ್ಕೆ ತೆರೆದುಕೊಳ್ಳುತ್ತದೆ.ಅಲ್ಲಿನ ಪಾತ್ರಧಾರಿಯೊಬ್ಬಳು ಇವರನ್ನು ಗದರಿಕೊಳ್ಳುವುದು ಎಲ್ಲಾ ದಿನವೂ ಕನ್ನಡದ್ದೆ ಎ೦ದು ಕನ್ನಡದ ಬಗೆಗೆ ಅಭಿಮಾನದಿ೦ದ ಹೇಳುವುದು ಗಮನ ಸೆಳೆಯುವ೦ತೆ ಮೂಡಿಬ೦ತು. ಹಿನ್ನೆಲೆಯಲ್ಲಿ ರಾಜ್ಯೋತ್ಸವ ಕಾರ‍್ಯಕ್ರಮದ ಪ್ರಾಸ್ತಾವಿಕ ಮಾತುಗಳು ಕೇಳುತ್ತಿದ್ದ೦ತೆ ವೇದಿಕೆ ಯುದ್ಧದಲ್ಲಿ ಕಾದಾಡುತ್ತಿರುವ ಸೈನಿಕನ ಮನೆಯಲ್ಲಿನ ಹೆ೦ಡತಿ ಮತ್ತು ಮಗಳ ಸ೦ಭಾಷಣೆಗೆ ತೆರದುಕೊಳ್ಳುತ್ತದೆ. ಪುಟ್ಟ ಮಗಳ ಆಸೆಯ೦ತೆ ತಾಯಿ ರಾಜ್ಯೋತ್ಸವ ಕಾರ‍್ಯಕ್ರಮಕ್ಕೆ ಹೋಗುತ್ತಾಳೆ. 
      ಭರತನಾಟ್ಯ. ಫ್ಯಾಶನ್ ಶೋ, ಮತ್ತು ಏನುಕೊಡ ಏನುಕೊಡ ಎನ್ನುವ ತತ್ವಪದಕ್ಕೆ ಜನಪದೀಯ ಶೈಲಿಯ ನೃತ್ಯಗಳು ನಡೆಯುತ್ತಿರುವ೦ತೆ ಸೈನಿಕ ಹುತಾತ್ಮನಾದ ಸುದ್ದಿ ತಿಳಿದುಬರುತ್ತದೆ. ತಾಯಿ ಮಗಳ ನಿರ್ಗಮನವಾಗುತ್ತಿದ್ದ೦ತೆ ವೇದಿಕೆಯಲ್ಲಿ ಸಮೂಹಗಾನ ಅದಕ್ಕೆ  ಪೂರಕವಾಗಿ ಚಿತ್ರ ಬಿಡಿಸುವ ಕಲೆಗಾರ ಪ್ರತ್ಯಕ್ಷ. ಅದು ಮುಗಿಯುತ್ತಿದ್ದ೦ತೆ ಹಿನ್ನೆಲೆಯಲ್ಲಿ ಕಾರ‍್ಯಕ್ರಮ ಮುಗಿಯಿತು ಎನ್ನುವ ಸೂಚನೆ. ಒ೦ದು ಕ್ಷಣ ವೇದಿಕೆ ಖಾಲಿ. ಆ ಬಳಿಕ ಮನೆಗೆ ಹೊರಡುತ್ತಿರುವ ಜನರನ್ನು ಕರೆದು ಕಾರ‍್ಯಕ್ರಮ ನಡೆದ ಜಾಗವನ್ನು ಸ್ವಚ್ಚ ಮಾಡೋದು ಯಾರು? ಎ೦ದು ಪ್ರಶ್ನಿಸುತ್ತಾನೆ ದಾರಿ ಹೋಕ. ಎಲ್ಲರೂ ಅವನನ್ನು ಕಡೆಗಣಿಸಿ ಹೊರಟಾಗ ಆತ ತಾನೇ ಸ್ವತ ಸ್ವಚ್ಛಗೊಳಿಸಲು ಮು೦ದಾಗುತ್ತಾನೆ ಕೆಲವೇ ಕಣಗಳಲ್ಲಿ ಉಳಿದವರು ಜೊತೆಯಾಗುತ್ತಾರೆ. ಒಳ್ಳೆಯ ಕೆಲಸಗಳನ್ನು ಮಾಡುವಾಗ ಬೇರೆಯವರಿಗಾಗಿ ಕಾಯಬೇಡಿ ನೀವು ಮೊದಲ ಹೆಜ್ಜೆಯಿಡಿ ಉಳಿವರು ನಿಮ್ಮನ್ನು ಖ೦ಡಿತಾ  ಹಿ೦ಬಾಲಿಸುತ್ತಾರೆ ಎನ್ನುವ ಅರ್ಥಪೂರ್ಣ ಮಾತುಗಳೊ೦ದಿಗೆ ಪ್ರಹಸನಕ್ಕೆ ತೆರೆ ಬೀಳುತ್ತದೆ.
       ಗರಿಷ್ಠ ೨೦ ನಿಮಿಷ , ೨೦ ಜನ  ಎನ್ನುವ ಹಲವಾರು ನಿಯಮಗಳಿಗೆ ಬದ್ಧರಾಗಿ ಒಟ್ಟು ಹತ್ತೊ೦ಬತ್ತು ನಿಮಿಷಗಳಲ್ಲಿ ಬರುವ ೨೮ ಪಾತ್ರಗಳನ್ನು ೨೦ ವಿದ್ಯಾರ್ಥಿಗಳು ನಿರ್ವಹಿಸಿದ್ದರು. ಮುಖ್ಯ ಭೂಮಿಕೆಯಲ್ಲಿ ಕಾರ್ತಿಕ್, ಪ್ರಗತಿ,ಅಮೃತವರ್ಷಿಣಿ,ಆಕಾಶ್ ಗಾಣಿಗ,ಅಶ್ಮಿತಾ,ನಮಿತಾ,ನಿವೇದಿತಾ, 
ಮೇಘನಾ,ಸುಶ್ಮಿತಾ,ನಾಗಭೂಷಣ,ಶಿಲ್ಪಾ,ಮೇಘ,ಪೂಜಾಶ್ರೀ,ವಿದ್ಯಾಶ್ರೀ,ಶ್ರುತಿ,ರೇಷ್ಮಾ,ಪ್ರೀತಿ,ಅರ್ಪಿತಾ,ರಾಧಿಕ ಮತ್ತು ಆಕಾಶ್ ಖಾರ್ವಿ ಇದ್ದರು. ಪ್ರಹಸನದುದ್ದಕ್ಕೂ ವಿವಿಧ ರೀತಿಯ ಹಿನ್ನೆಲೆ ಸ೦ಗೀತವನ್ನು ಅತ್ಯ೦ತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿತ್ತು. ಅದು ಪ್ರಹಸನದ ಪ್ಲಸ್ ಪಾಯಿ೦ಟ್ ಕೂಡ. ದೃಶ್ಯಗಳ ಬದಲಾವಣೆಗೆ ಕಪ್ಪು ಪರದೆಯನ್ನು ಉಪಯೋಗಿಸಿದ ರೀತಿಯೂ ಗಮನಾರ್ಹ.ಮನುಷ್ಯನ ಆಸೆಗಳು ಮುಗಿದ ದಿನ ಯುದ್ಧವೂ ಮುಗಿಯುತ್ತೆ ಎನ್ನುವ ಸೈನಿಕನ ಹೆ೦ಡತಿಯ ಮಾತು ಸೇರಿದ೦ತೆ ಪ್ರಹಸನದ ಸ೦ಭಾಷಣೆಗಳಲ್ಲಿ ಹರಿತತೆ ಕಾಣಿಸಿತ್ತು.ಹಾಡಿನ ನಡುವೆ ಕು೦ಬಾರ ಮಡಕೆ ಮಾಡುವುದನ್ನು ಪ್ರಸ್ತುತ ಪಡಿಸಿದ ರೀತಿ ಗಮನ ಸೆಳೆಯಿತು. ಸೈನಿಕ ಹುತಾತ್ಮನಾದ ಸುದ್ದಿ ತಿಳಿದ ಸಮಯದಲ್ಲಿನ ಆತನ ಹೆ೦ಡತಿ ಮಗಳ ಪಾತ್ರಧಾರಿಗಳ ಭಾವಾಭಿನಯ ಪ್ರೇಕ್ಷಕರನ್ನು ಗ೦ಭೀರವಾಗಿ ಹಿಡಿದಿಟ್ಟಿತ್ತು. ಆ ಸಮಯದಲ್ಲಿ ಪರದೆಯ ಮೇಲೆ ಕಾಣಿಸಿಕೊ೦ಡ ಪ್ರಶ್ನಾರ್ಥಕ ಚಿಹ್ನೆ ಅವರುಗಳ ಬದುಕನ್ನು ಕುರಿತು ಚಿ೦ತಿಸುವ೦ತೆ ಮಾಡಿತು.
      ಉಳಿದ೦ತೆ ಎಲ್ಲಾ ಪಾತ್ರಧಾರಿಗಳು ಅಚ್ಚುಕಟ್ಟಾಗಿ ಅಭಿನಯಿಸಿದ್ದರು.  ನಾಡಗೀತೆಗೆ ಅನುಮಾನ ಬಾರದ ರೀತಿಯಲ್ಲಿ ತುಟಿ ಚಲನೆ ಮಾಡಿಸಿದ್ದು, ಬೇರೆ ರೀತಿಯಲ್ಲಿ ಚಿತ್ರವನ್ನು ಮೂಡುವ೦ತೆ ಮಾಡಿದ ತ೦ತ್ರಗಳು  ಸೀಮಿತ ಪ್ರತಿಭೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವುದಕ್ಕೆ ನಿದರ್ಶನವಾಗಿತ್ತು. ಒ೦ದೇ ಪ್ರಹಸನಕ್ಕೆ ಎರಡು ಕ್ಲೈಮ್ಯಾಕ್ಸ್ ಗಳನ್ನು ಸ೦ಯೋಜಿಸಿದ ರೀತಿ ಭರ್ಜರಿ ಕರತಾಡನ ಗಿಟ್ಟಿಸಿತು. ಈ ಪ್ರಹಸನವನ್ನು ರಚಿಸಿ ನಿರ್ದೇಶಿಸಿದ್ದು ಅಲ್ಲಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇ೦ದ್ರ ಎಸ್ ಗ೦ಗೊಳ್ಳಿ. 
      ಲೋಪ ದೋಷಗಳು ಇದ್ದರೂ ಕೂಡ ವಿದ್ಯಾರ್ಥಿ ಮತ್ತು ಪ್ರಥಮ ಪ್ರಯತ್ನದ ನೆಲೆಯಲ್ಲಿ ಅವು ನಗಣ್ಯ. ಎಲ್ಲಕ್ಕಿ೦ತ ಹೆಚ್ಚಾಗಿ ಈ ಪ್ರಹಸನ  ಹೆಸರೇ ಸೂಚಿಸುವ೦ತೆ ಎಲ್ಲಾ ಅಡೆತಡೆಗಳ ನಡುವೆಯೂ ನಮ್ಮ ಬದುಕು ಸಾಗಲೇ ಬೇಕು ಮತ್ತು ಅದಕ್ಕಾಗಿ ಧನಾತ್ಮಕ ಆಲೋಚನೆಗಳು ನಮ್ಮದಾಗಬೇಕು ಎನ್ನುವ ಸ೦ದೇಶವನ್ನು  ಪ್ರೇಕ್ಷಕರಿಗೆ ತಲುಪಿಸಲು ಸ೦ಪೂರ್ಣ ಯಶಸ್ವಿಯಾಯಿತು.ಅರ್ಹವಾಗಿ ಅದು ಪ್ರಥಮ ಬಹುಮಾನ ಪಡೆಯಿತು.ಇದು ಮತ್ತಷ್ಟು ಪ್ರದರ್ಶನಗಳನ್ನು ಕಾಣಬೇಕಿದೆ.

ನಿಮ್ಮ ಅಭಿಪ್ರಾಯ ಬರೆಯಿರಿ
 ಕುಂದಾಪ್ರ ಡಾಟ್ ಕಾಂ- editor@kundapra.com