ಆಳ್ವಾಸ್ ವಿದ್ಯಾರ್ಥಿಗಳ ಮಾದರಿ ಕಾರ್ಯ: ‘ಚಿಣ್ಣರ ತಂಗುದಾಣ’ಕ್ಕೆ ನೆರವಿನ ಹಸ್ತ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ: ಸಮಾಜಮುಖಿ ಚಿಂತನೆ ಹಾಗೂ ಸಾಂಸ್ಕೃತಿಕ ಸೌಹಾರ್ದತೆಯ ಸಾರ್ಥಕ ಉದಾಹರಣೆಯಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಮಂಗಳೂರಿನ ನಿರಾಶ್ರಿತ ಮಕ್ಕಳ ಆಶ್ರಯತಾಣ ‘ಚಿಣ್ಣರ ತಂಗುದಾಣ’ಕ್ಕೆ ಭೇಟಿ ನೀಡಿ ₹50,000ಕ್ಕೂ ಅಧಿಕ ಮೊತ್ತದ ದೈನಂದಿನ ಅಗತ್ಯ ವಸ್ತುಗಳು, ಆಹಾರ ಸಾಮಗ್ರಿಗಳು, ಕ್ರೀಡಾ ಉಪಕರಣಗಳು ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಹಸ್ತಾಂತರಿಸಿದರು.

ಇತ್ತೀಚೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಸಂಪ್ರದಾಯ ದಿನಾಚರಣೆಯನ್ನು ವೈವಿಧ್ಯತೆಯಲ್ಲಿ ಏಕತೆ ಎಂಬ ಸಂದೇಶದೊಂದಿಗೆ ಅದ್ದೂರಿಯಾಗಿ ಆಚರಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಸಾಂಪ್ರದಾಯಿಕ ಆಹಾರ ಮೇಳ ಹಾಗೂ ವಿವಿಧ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿತ್ತು.  

ಕೇರಳ ರಾಜ್ಯದ ವಿದ್ಯಾರ್ಥಿಗಳ ತಂಡವು ಅತ್ಯುತ್ತಮ ಪ್ರದರ್ಶನ ಹಾಗೂ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಮೂಲಕ  ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು.

ಕೇವಲ ಸಾಂಸ್ಕೃತಿಕ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜದ ಒಳಿತಿಗೂ ಕೈಜೋಡಿಸುವ ಉದ್ದೇಶದಿಂದ ಆಹಾರ ಮೇಳದಿಂದ ಸಂಗ್ರಹವಾದ ಮೊತ್ತವನ್ನು ಪ್ರತಿ ವರ್ಷದಂತೆ ಸಮಾಜಮುಖಿ ಕಾರ್ಯಕ್ಕೆ ಬಳಸಲು ನಿರ್ಧರಿಸಲಾಯಿತು. ಕಳೆದ ಬಾರಿಯ ಟ್ರೆಡಿಷನಲ್ ಡೇ ಸಂದರ್ಭದಲ್ಲಿ ಸಂಗ್ರಹಿಸಿದ ಸುಮಾರು 1 ಲಕ್ಷ  ರೂಪಾಯಿಯನ್ನು ಮಣಿಪುರದ ಸಂಘರ್ಷದಲ್ಲಿ ನೊಂದ ಕುಟುಂಬಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೆರವು ನೀಡಲಾಗಿತ್ತು.  ಆ ನೆಲೆಯಲ್ಲಿ ಈ ಬಾರಿ ಮಂಗಳೂರಿನ ನಿರಾಶ್ರಿತ ಮಕ್ಕಳ ಆಶ್ರಯತಾಣ ‘ಚಿಣ್ಣರ ತಂಗುದಾಣ’ಕ್ಕೆ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ನೀಡಲಾಯಿತು.

ಶಿಕ್ಷಣವು ಕೇವಲ ಪಠ್ಯ ಜ್ಞಾನಕ್ಕೆ ಸೀಮಿತವಾಗಿರದೆ, ಸಮಾಜದ ನೋವಿಗೆ ಸ್ಪಂದಿಸುವ ಮನಸ್ಸನ್ನು ರೂಪಿಸಬೇಕು. ಸಂಪ್ರದಾಯ ದಿನಾಚರಣೆ ಮೂಲಕ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈವಿಧ್ಯತೆಯನ್ನು ಅರಿತುಕೊಳ್ಳುವುದರ ಜೊತೆಗೆ, ಸಮಾಜದತ್ತ ತಮ್ಮ ಹೊಣೆಗಾರಿಕೆಯನ್ನು ಕಾರ್ಯರೂಪದಲ್ಲಿ ತೋರಿಸಿದ್ದಾರೆ. ಈ ಮನೋಪ್ರವೃತ್ತಿ ಯುವಜನರಲ್ಲಿ ಮಾನವೀಯತೆ, ಸಹಾನುಭೂತಿ ಮತ್ತು ಸಾಮಾಜಿಕ ಬದ್ಧತೆಯನ್ನು ಬೆಳೆಸುತ್ತದೆ: ವಿವೇಕ ಆಳ್ವ, ಟ್ರಸ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ