ಕುಂದಾಪುರ: ಕೊರ್ಗಿಯ 15 ದಲಿತ ಕುಟುಂಬಗಳಿಗೆ ಡಿಸಿ ಮನ್ನಾ ಭೂ ಮಂಜೂರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರತಾಲೂಕಿನ ಕೊರ್ಗಿ ಗ್ರಾಮದ ಸ.ನಂ. 149ರ ಡಿ.ಸಿ. ಮನ್ನಾ ಭೂಮಿಯಲ್ಲಿ ತಲಾ 0.26 ಎಕ್ರೆಯಂತೆ ಒಟ್ಟು 15 ಮಂದಿಗೆ ಭೂಮಿ ಮಂಜೂರಾತಿ ಆದೇಶ ದೊರಕಿದೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ಎದುರು ಶನಿವಾರ ಕುಂದಾಪುರ ತಹಶೀಲ್ದಾರ್ ಕುರ್ಡೇಕರ್ ಅವರು ಫಲಾನುಭವಿಗಳಿಗೆ ಭೂಮಿ ಮಂಜೂರಾತಿ ಆದೇಶ ಪತ್ರವನ್ನು ವಿತರಿಸಿದರು.

ಈ ವೇಳೆ ಡಾ. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಂಘಟನೆಯ ರಾಜ್ಯ ಸಂಘಟನಾ  ಸಂಚಾಲಕರಾದ ಸುಂದರ್ ಮಾಸ್ಟರ್ ಅವರು  ನಮ್ಮ ಭೂಮಿ... ನಮ್ಮ ಹಕ್ಕು  ಎನ್ನುವ ಘೋಷಣೆಯಡಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹೋರಾಟ ನಡೆಯುತ್ತಿದ್ದು, ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ 15 ಕುಟುಂಬಕ್ಕೆ ಹಕ್ಕು ಪತ್ರ ಕೊಡಿಸುವಲ್ಲಿ ತಾಲೂಕು ಸಮಿತಿ ಯಶಸ್ವಿಯಾಗಿದೆ ಎಂದು ಹೇಳಿದರು. 

ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಮಾತನಾಡಿ, ಸುಮಾರು 20 ವರ್ಷಗಳಿಂದ ನಮ್ಮ ಸಂಘಟನೆ ಭೂರಹಿತರಿಗೆ ಭೂಮಿ ಒದಗಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹಲವಾರು ರೀತಿಯ ಹೋರಾಟವನ್ನು ಸಂಘಟಿಸುತ್ತಾ ಬಂದಿದೆ. ಹೋರಾಟದ ಫಲವಾಗಿ ಇಂದು ಕೊರ್ಗಿ ಗ್ರಾಮದ 15 ಬಡ ಭೂರಹಿತ ಕುಟುಂಬಗಳಿಗೆ 0.26 ಎಕರೆ ಭೂಮಿ ದೊರಕಿದೆ. ಇದರ ಹಿಂದೆ ನಮ್ಮ ತಾಲ್ಲೂಕು ಸಮಿತಿ ಮತ್ತು ಕೊರ್ಗಿ ಗ್ರಾಮ ಶಾಖೆಯ ಪರಿಶ್ರಮ ಹಾಗೂ ಒಗ್ಗಟ್ಟಿನ ಪ್ರಯತ್ನವೂ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕುಂದಾಪುರ ತಾಲ್ಲೂಕು ಸಮಿತಿ ಪ್ರಧಾನ ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಮಾತನಾಡಿ, ಕುಂದಾಪುರ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲೂ ಡಿಸಿ ಮನ್ನಾ ಭೂಮಿ ಲಭ್ಯವಿದ್ದರೂ ಕೆಲ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಹ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಭೂಮಿ ದೊರಕುತ್ತಿಲ್ಲ. ಕೊರ್ಗಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ತಹಶೀಲ್ದಾರ್ ಅವರ ಇಚ್ಛಾಶಕ್ತಿ ಹಾಗೂ ಕೊರ್ಗಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ, ಪಂಚಾಯಿತಿಯ ಮಾಜಿ ಅಧ್ಯಕ್ಷರು ಮತ್ತು ಮಾಜಿ ಸದಸ್ಯರು, ಸಂಘಟನೆಯ ನ್ಯಾಯ ಸಮ್ಮತವಾದ ಭೂಮಿ ಹಕ್ಕಿನ ಹೋರಾಟದ ತೀವ್ರತೆಯನ್ನು ಅರಿತು ಮನವಿಗೆ ಸಂಪೂರ್ಣವಾಗಿ ಸ್ಪಂದಿಸಿದ ಫಲವಾಗಿ, ಕೊರ್ಗಿ ಗ್ರಾಮದ ಅರ್ಹ ಬಡ ಭೂ ರಹಿತ 15 ಎಟುಂಬಗಳಿಗೆ ಭೂಮಿ ದೊರಕಿದೆ ಎಂದರು. 

ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರ್, ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ, ಬ್ರಹ್ಮಾವರ ತಾಲೂಕು ಸಂಚಾಲಕ ಶಾಮ ಸುಂದರ್ ತೆಕ್ಕಟ್ಟೆ, ಕಾಪು ತಾಲೂಕು ಸಂಚಾಲಕ ರಾಜೇಂದ್ರ ನಾಥ್, ಜಿಲ್ಲಾ ಮಹಿಳಾ ಒಕ್ಕೂಟದ ಗೀತಾ ಸುರೇಶ್ ಕುಮಾರ್, ಭವಾನಿ ಸಿದ್ಧಾಪುರ, ಕುಂದಾಪುರ ತಾಲೂಕು ಸಂಘಟನಾ ಸಂಚಾಲಕ ಅಶೋಕ್ ಮೊಳಹಳ್ಳಿ, ತಾಲೂಕು ಕೋಶಧಿಕಾರಿ ಚಂದ್ರ ಕೊರ್ಗಿ, ಚಂದ್ರ ಉಳ್ಳೂರು,ಗೋವಿಂದ ಹಳಗೇರಿ, ಕ್ರಷ್ಣ ಪಿ. ಎಂ.ಕುಮಾರ್ ಕೋಟ, ಕೀರ್ತಿಕುಮಾರ್ ಪಡುಬಿದ್ರಿ, ಪ್ರಶಾಂತ್ ಬಿರ್ತಿ, ಶ್ರೀಧರ ಸಿದ್ದಾಪುರ, ಸತೀಶ್ ಕೊರ್ಗಿ, ಕ್ರಷ್ಣ ಕೊರ್ಗಿ ಉಪಸ್ಥಿತರಿದ್ದರು.