ಪಂಚಶಕ್ತಿ ಸಂಘದ ನೇತೃತ್ವದಲ್ಲಿ ಶಂಕರ ಜಯಂತೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶಂಕರಾಚಾರ್ಯರ ಜೀವನ ಯಶೋಗಾಧೆ ಇಂದಿನ ಜನಾಂಗಕ್ಕೆ ಮಾದರಿ ಬದುಕಿಗೆ ಪ್ರೇರಕ ಶಕ್ತಿ, ಆ ಮಹಾನ್ ಚೇತನ ಸನಾತನ ಹಿಂದೂ ಧರ್ಮ ಪ್ರತಿಬಿಂಬ ಎಂದು ಉಪನ್ಯಾಸಕಿ ಸವಿತಾ ಎರ್ಮಾಳ್ ಹೇಳಿದರು.

ಅವರು ಕೋಡಿ ತಲೆ ಹೊಸಬೇಂಗ್ರೆ ಇಲ್ಲಿನ ಪಂಚಶಕ್ತಿ ಸಂಘ ಇದರ 24ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ಉಪನ್ಯಾಸ ನೀಡಿ ಭಾರತೀಯ ಸನಾತನ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆ ಅಪಾರ ಅಂತಹ ದೈವಿ ಸ್ವರೂಪಿ ಜಯಂತೋತ್ಸವ ಅರ್ಥಪೂರ್ಣವಾಗಿಸಲು ಅವರ ಜೀವನದ ತಳಹದಿಯನ್ನು ನಾವುಗಳು ಅಳವಡಿಸಿಕೊಳ್ಳಬೇಕು ಆಗ ಮಾತ್ರ ಜಯಂತೋತ್ಸವ ಕಾರ್ಯಕ್ರಮಕ್ಕೆ ಅರ್ಥಬರಲು ಸಾಧ್ಯ ಎಂದರು.

ಸಭೆಯಲ್ಲಿ ಶೈಕ್ಷಣಿಕ ಸಾಧಕಿ ಸಾನ್ವಿ ನಾಗರಾಜ್ ಖಾರ್ವಿ ಪರವಾಗಿ ಪೋಷಕರಾದ ರೇವತಿ ಖಾರ್ವಿ ಸನ್ಮಾನ ಸ್ವೀಕರಿಸಿದರು.

ವಾರ್ಷಿಕೋತ್ಸವದ ಹಿನ್ನಲ್ಲೆಯಲ್ಲಿ ನಡೆದ ಕ್ರೀಡೆ ಇನ್ನಿತರ ಆಟೋಟ ಚಟುವಟಿಕೆಗಳಲ್ಲಿ ಜಯಶಾಲಿಗಳಾದ ತಂಡ ಹಾಗೂ ಪ್ರಮುಖರಿಗೆ ಬಹುಮಾನವನ್ನು ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಪತ್ರಕರ್ತ ರವೀಂದ್ರ ಕೋಟ ವಹಿಸಿ ಪಂಚಶಕ್ತಿಯ ಸಾಮಾಜಿಕ ಕೈಂಕರ್ಯಗಳನ್ನು ಹಾಗೂ ಶಂಕರ ಜಯಂತಿ ಆಚರಿಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸ್ಥಳೀಯರಾದ ಶಂಕರಖಾರ್ವಿ ಶಂಕರ ಜಯಂತಿ ಪೂಜಾ ಕಾರ್ಯ ನೆರವೆರಿಸಿದರು. ಮುಖ್ಯ ಅಭ್ಯಾಗತರಾಗಿ ಶ್ರೀಂಗೇರಿ ಶಾರದ ಪೀಠದ ದ.ಕ ಮತ್ತು ಉಡುಪಿ ಜಿಲ್ಲೆಯ ಪಾದಪೂಜಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಖಾರ್ವಿ, ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ಪಂಚಶಕ್ತಿ ಸಂಘದ ಅಧ್ಯಕ್ಷ ಪವೀಣ್ ಡಿ ಖಾರ್ವಿ, ಕೋಡಿ ತಲೆ ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪಂಚಶಕ್ತಿ ಸಂಘದ ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಸುಪ್ರಿತಾ ಖಾರ್ವಿ ವಂದಿಸಿದರು.