ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಡುಪಿ ರಾಜ್ಯ ಮಹಿಳಾ ನಿಲಯ ಅಧೀಕ್ಷಕರು ಪುಷ್ಪರಾಣಿ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಟೈಲರಿಂಗ್ ಉದ್ಯಮವು ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸಿದರೆ ಈ ಕ್ಷೇತ್ರದಲ್ಲಿ ಭದ್ರವಾಗಿ ನೆಲೆನಿಲ್ಲಲು ಸಾಧ್ಯ ಎಂದು ತಿಳಿಸಿದರು.
ತರಬೇತಿ ಪೂರ್ಣಗೊಂಡ ನಂತರ ಕೆಲವರು ಸ್ವಂತ ಉದ್ಯಮ ಆರಂಭಿಸಲು ಹಿಂಜರಿಯುತ್ತಾರೆ. ಮುಂದೆ ಎದುರಾಗುವ ಸಣ್ಣ ತೊಂದರೆಗಳಿಗೆ ಭಯಪಟ್ಟು ಹಿಂದೆ ಸರಿಯುವುದು ಸಾಮಾನ್ಯ. ಆದರೆ ಯಾವುದೇ ಕ್ಷೇತ್ರದಲ್ಲಾದರೂ ಸವಾಲುಗಳು ಸಹಜವಾಗಿವೆ. ಆದ್ದರಿಂದ ಸೋಲಿಗೆ ತಲೆಬಾಗದೆ, ಕ್ರೀಡಾ ಮನೋಭಾವದಿಂದ ಮತ್ತೆ ಮತ್ತೆ ಪ್ರಯತ್ನಿಸಬೇಕು. ಸೋಲು ಹಾಗೂ ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಧನಾತ್ಮಕ ಚಿಂತನೆ ಯಶಸ್ಸಿನ ದಾರಿಯನ್ನು ತೋರಿಸುತ್ತದೆ ಎಂದು ಹೇಳಿದರು.
ನಂತರ ತರಬೇತಿ ಅವಧಿಯಲ್ಲಿ ಶಿಬಿರಾರ್ಥಿಗಳು ತಯಾರಿಸಿದ್ದ ವಿವಿಧ ಮಾದರಿಯ ವಸ್ತ್ರಗಳನ್ನು ವೀಕ್ಷಿಸಿ, ಶಿಬಿರಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ನೀಡಲಾಗಿರುವ ತರಬೇತಿಯ ಸದ್ಬಳಕೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ತರಬೇತಿ ಅವಧಿಯಲ್ಲಿ ಪಾಲಿಸಿದ ಶಿಸ್ತನ್ನು ಜೀವನದುದ್ದಕ್ಕೂ ಮುಂದುವರಿಸಿದರೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುಮಲತಾ, ಮಾಲತಿ ಎಸ್., ಸ್ವಾತಿ ಹಾಗೂ ವಿನಯ್ ಶೆಟ್ಟಿ ಅವರು ತರಬೇತಿಯ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕರಾದ ಸಂತೋಷ್ ಶೆಟ್ಟಿ ನಿರೂಪಿಸಿದರು. ಉಪನ್ಯಾಸಕರಾದ ಚೈತ್ರ ಕೆ. ಸ್ವಾಗತಿಸಿದರು. ಭವ್ಯ ಹಾಗೂ ಅಂಕಿತ ಪ್ರಾರ್ಥನೆ ನೆರವೇರಿಸಿದರು. ಕಚೇರಿ ಸಹಾಯಕರಾದ ಶಾಂತಪ್ಪ ವಂದಿಸಿದರು.
