ಪ್ರಾಧಿಕಾರದ ಈ ನಿರ್ಧಾರವನ್ನು ಸ್ವಾಗತಿಸಿ, ಲೇಖಕ ಮುಷ್ತಾಕ್ ಹೆನ್ನಾಬೈಲ್ ನೇತೃತ್ವದ ಸುಮಾರು 25 ಜನರ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯ ಸದಸ್ಯರ ನಿಯೋಗವು ವಿಧಾನಸೌಧದಲ್ಲಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಮದರಸಗಳಲ್ಲಿ ಕನ್ನಡ ಕಲಿಕೆಯ ನಿರ್ಧಾರವನ್ನು ಸ್ವಾಗತಿಸಿ ಬೆಂಬಲವನ್ನು ಸೂಚಿಸಿತು.
ಕನ್ನಡ ಕಲಿಕೆಗೆ ಸರ್ಕಾರದ ಬೆಂಬಲವನ್ನು ಶ್ಲಾಘಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಕೂಡ ಕೃತಜ್ಞತೆ ವ್ಯಕ್ತಪಡಿಸಿದ ಪತ್ರವನ್ನು ಅವರ ಆಪ್ತ ಕಾರ್ಯದರ್ಶಿ ಚಿರಂಜೀವಿ ಅವರ ಮೂಲಕ ನೀಡಲಾಯಿತು. ಇದರ ಜೊತೆಗೆ, ರಾಜ್ಯದ ಉರ್ದು ಮತ್ತು ನವಾಯಿತಿ ಮಾತನಾಡುವ ಪ್ರದೇಶಗಳಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 12 ಅಂಶಗಳ ಸಲಹಾಪಟ್ಟಿಯನ್ನು ನೀಡಿ ಪರಿಗಣಿಸುವಂತೆ ವೇದಿಕೆ ಮನವಿ ಮಾಡಿತು.
ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯ ಮೌಲಾನಾ ಝಮೀರ್ ಅಹಮದ್ ರಶಾದಿರವರ "ದಿವ್ಯಜ್ಯೋತಿ" ಕನ್ನಡ ವೆಬ್ ಸೈಟನ್ನು ಪುರುಷೋತ್ತಮ ಬಿಳಿಮಲೆಯವರು ಉದ್ಘಾಟಿಸಿದರು.
ವೇದಿಕೆ ನೀಡಿದ ಸಲಹೆಗಳು ಸರಳವಾಗಿದ್ದು ಅನುಷ್ಠಾನಕ್ಕೆ ಅನುಕೂಲವಾಗಿದೆ ಎಂದು ಅಭಿಪ್ರಾಯ ಪಟ್ಟ ಬಿಳಿಮಲೆಯವರು, ತಮ್ಮ ಅವಧಿ ಮುಗಿಯುವುದರ ಒಳಗೆ ರಾಜ್ಯಾದ್ಯಂತ ಜಾರಿ ಮಾಡಲು ಗರಿಷ್ಠ ಪ್ರಯತ್ನ ಪಡುವುದಾಗಿ ಭರವಸೆ ಇತ್ತರು.
ನಿಯೋಗದಲ್ಲಿ ವೇದಿಕೆಯ ಗೌರವಾಧ್ಯಕ್ಷ ಡಾ. ಮುಹಮ್ಮದ್ ಶಫಿ ಮುಲ್ಲಾ, ಅಧ್ಯಕ್ಷ ಝಾಕಿರ್ ಹುಸೇನ್ ಉಚ್ಚಿಲ್ಲ, ಕಾರ್ಯದರ್ಶಿ ರಹಮತ್ ದಾವಣಗೆರೆ, ಮಾಜಿ ಅಧ್ಯಕ್ಷ ಅನೀಸ್ ಪಾಷಾ, ಕೋಟ ಇಬ್ರಾಹಿಂ ಸಾಹೇಬ್, ಮೌಲಾನಾ ಅಬ್ದುಲ್ ಹಫೀಜ್ ಕಾಶ್ಮೀ, ದಸ್ತಗೀರ್ ಕಲ್ಲಹಳ್ಳಿ, ಅಸ್ಲಾಂ ಹೈಕಾಡಿ, ಅಶ್ರಫ್ ಕುಂದಾಪುರ, ಅಬ್ದುಲ್ ರೌಫ್, ಖಲೀಲ್ ತಲಪಾಡಿ, ಅಸ್ಲಾಂ ಪಾಶಾ ನ್ಯಾಮತಿ, ಇಬ್ರಾಹಿಂ ಬಿ ಟಿ, ಪರ್ವೇಜ್ ಅಹಮದ್ ತೀರ್ಥಹಳ್ಳಿ ಮುಹಮ್ಮದ್ ರಿಯಾಜ್ ಕಾರ್ಕಳ, ಡಾ. ಅಮೀರುದ್ದಿನ್ ಕಾಜಿ, ಆರ್ ಎ ಲೋಹಾನಿ, ಶಮೀರ್ ಜಿ ಮುಂತಾದವರು ಉಪಸ್ಥಿತರಿದ್ದರು.
