ಅಮೆರಿಕಾ ನಿವಾಸಿ ಆಲೂರಿನ ಆನಂದ ಪೂಜಾರಿಗೆ ವಾಷಿಂಗ್ಟನ್ ವಿವಿಯಿಂದ ಗೌರವ ಡಾಕ್ಟರೇಟ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚೆಗೆ ವಾಷಿಂಗ್ಟನ್ ಡೀಸಿಯಲ್ಲಿರುವ ಪ್ರತಿಷ್ಠಿತ ವಾಷಿಂಗ್ಟನ್ ಎಡ್ಡೆಂಟಿಸ್ಟ್ ಯುನಿವರ್ಸಿಟಿಯ 111ನೇ ಪದವಿ ಪ್ರದಾನ ಸಮಾರಂಭದಂದು ಮೆರಿಲ್ಯಾಂಡ್ ನಿವಾಸಿ ಉದ್ಯಮಿ, ಸಾಧಕ ಆನಂದ ಪೂಜಾರಿ ಅವರಿಗೆ 'ಡಾಕ್ಟರ್ ಆಫ್ ಹೂಮನ್ ಲೆಟರ್ಸ್' ಗೌರವ ಪದವಿಯನ್ನು ನೀಡಿ ಗೌರವಿಸಲಾಯಿತು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ 'ಬ್ಯುಸಿನೆಸ್ ಎಂಡ್ ಕಮುನಿಟಿ ಸರ್ವಿಸೆಸ್'ನಲ್ಲಿ ಸಮಾಜಕ್ಕೆ ಅಸಾಧರಣ ಕೊಡುಗೆ ನೀಡಿದ ಸಾಧಕರಿಗೆ ಈ ಗೌರವ ಡಾಕ್ಟರೇಟ್ ಗೌರವವನ್ನು ನೀಡಲಾಗುತ್ತದೆ ಎಂದು ಉದ್ಯೋಷಕ ಚೆರ್ಲಿ ಕಿಸುಂಝು ಹೇಳಿದರು.

ವಿಶ್ವವಿದ್ಯಾಲಯದ ಅಧ್ಯಕ್ಷರಾದ ವೇಯಮೌತ್ ಸ್ಟೆನ್ಸ್ ಅವರು, ಆನಂದ ಪೂಜಾರಿ ಅವರ ಹೊಟೇಲು ಮತ್ತು ಆತಿಥ್ಯ ಉದ್ಯಮದಲ್ಲಿ ವೃತ್ತಿಪರ ಸೇವೆ; ಸರಕಾರದ ರಾಜತಾಂತ್ರಿಕ ಸಂಸ್ಥೆಗಳೊಂದಿಗಿನ ಸೌಹಾರ್ದಪೂರ್ಣ ವೈಯಕ್ತಿಕ ಬಾಂದವ್ಯ ಮತ್ತು ತಮ್ಮ ವಿವಿಧ ಉದ್ಯಮದ ಮೂಲಕ ನೂರಾರು ಉದ್ಯೋಗಗಳನ್ನು ಸೃಷ್ಟಿ ಮಾಡಿರುವುದಲ್ಲದೆ, ಅನೇಕ ವಿದ್ಯಾರ್ಥಿಗಳು ಸಾಮಾಜಿಕ ಸೇವಾ ವಲಯದಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿ ಆನಂದ ಪೂಜಾರಿ ಅವರನ್ನು ಅಭಿನಂದಿಸಿ, ನೆರೆದ ವಿದ್ಯಾರ್ಥಿಗಳು, ಅವರ ಪರಿವಾರದವರು ಮತ್ತು ಗೌರವಾನ್ವಿತ ಅತಿಥಿಗಳನ್ನು ಸ್ವಾಗತಿಸಿ ಶುಭ ಹಾರೈಸಿದರು.

ಗೌರವಕ್ಕೆ ಉತ್ತರವಾಗಿ ಆನಂದ ಪೂಜಾರಿಯವರು, ನಿಮ್ಮೆದುರು ನಾನು ತೀರಾ ವಿನಮ್ರತೆ ಮತ್ತು ಕೃತಜ್ಞತಾ ಪೂರ್ವಕವಾಗಿ ನಿಂತಿರುವೆನು. ಈ ಡಾಕ್ಟರೇಟ್ ಪದವಿ ಅತ್ಯಂತ ಗೌರವ ಮತ್ತು ಹೆಮ್ಮೆಯದ್ದಾಗಿದೆ. ನಾನೇನು ಅನುಕೂಲಸ್ಥ ಪರಿವಾರದ ಹಿನ್ನೆಲೆಯಿಂದ ಬಂದವನಲ್ಲ. ನಾನು ಆರಂಭದಿಂದಲೂ ಪರಿಶ್ರಮ, ಶಿಸ್ತು ಮತ್ತು ನಂಬಿಕೆಯನ್ನು ಜೀವನ ಮೌಲ್ಯವಾಗಿರಿಸಿಕೊಂಡವನು. ಸಮಾಜದ ಬಗ್ಗೆ ಯಾವತ್ತೂ ನನಗೆ ಗೌರವ ಇದೆ. ಈ ಮೌಲ್ಯಗಳು ನನ್ನ ಬದುಕಿನ ದೃಢವಾದ ತಳಗಟ್ಟಾಗಿ ಸಹಾಯ ಮಾಡಿವೆ. ಈ ಗೌರವ ಪದವಿಗೆ ನಾನೊಬ್ಬನೆ ಹಕ್ಕುದಾರನಲ್ಲ. ಇದಕ್ಕೆ ಸದಾ ಬೆಂಗಾವಲಾಗಿರುವ ನನ್ನ ಪತ್ನಿ ಸುಮಿತಾ, ಮಕ್ಕಳು ಮತ್ತು ನನ್ನೆಲ್ಲಾ ಹಿತಚಿಂತಕರೂ ಪಾಲುದಾರರಾಗಿದ್ದಾರೆ'ಎಂದು ಹೇಳಿ ವಾಷಿಂಗ್ಟನ್ ಎಡ್ರೆಂಟಿಸ್ಟ್ ಯುನಿವರ್ಸಿಟಿಯವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗ್ಲೋಬಲ್ ಅಲಯಂಟ್ ಐಎನ್ಸಿಯ ಸಿಇಓ ಮತ್ತು ಅಧ್ಯಕ್ಷರಾದ ರಾಜನ್ ನಟರಾಜನ್, ಆನಂದ ಪೂಜಾರಿಯವರು ಈ ಮಹತ್ವದ ಡಾಕ್ಟರೇಟ್ ಗೌರವಕ್ಕೆ ಅತ್ಯಂತ ಅರ್ಹ ವ್ಯಕ್ತಿಯಾಗಿದ್ದಾರೆ. ರೆ. ಇದು ಅವರ ಸಮರ್ಪಣೆ, ಬದ್ದತೆ ಮತ್ತು ಪರಿಶ್ರಮಕ್ಕೆ ದೊರೆತ ಪ್ರತಿಫಲವಾಗಿದೆ ಎಂದು ಹಾರೈಸಿದರು.

ಅಮೇರಿಕಾದಲ್ಲಿರುವ ಭಾರತದ ರಾಯಬಾರಿ ಕಛೇರಿಗೆ ಕ್ಯಾಟರಿಂಗ್ ಸೇವೆ ಸಲ್ಲಿಸುವ ಆನಂದ ಪೂಜಾರಿಯವರ ರುಚಿಕರ ಆಹಾರಾತಿಥ್ಯ ಸೇವೆಗೆ ಭಾರತದ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ ಸಿಂಗ್ ಮತ್ತು ಕಳೆದ ವರ್ಷ ನರೇಂದ್ರ ಮೋದಿಯವರು ಸಹ ಮನಸಾ ಶ್ಲಾಘಿಸಿರುವುದನ್ನು ನೆನಪಿಸಿಕೊಳ್ಳಬಹುದು.

ಜುವೆಲ್ ಆಫ್ ಇಂಡಿಯಾ, ವುಡ್ ಲ್ಯಾಂಡ್ಸ್, ಉಡುಪಿ ರೆಸ್ಟೋರೆಂಟ್, ಪೂಜಾರಿ ಕನ್ಸಲ್ಟ, ಜಿಡಿ ಹಾಸ್ಪಿಟಾಲಿಟಿ ಮುಂತಾದ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ  ಮೌನ ಸಾಧಕ ಆನಂದ ಪೂಜಾರಿಯವರು ಮೂಲತ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರು ಎಂಬ ಪುಟ್ಟ ಗುಡ್ಡ ಗಾಡು ಹಳ್ಳಿಯ ಕೃಷಿಕ ಪರಿವಾದವರು. ಆಲೂರಿನ ಸರಕಾರಿ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ ಮುಂಬೈಗೆ ಬಂದು, ಐದಾರು ವರ್ಷ ಹಗಲು ಹೊತ್ತು ಕ್ಯಾಂಟೀನಿನಲ್ಲಿ ಕೆಲಸ ಮಾಡುತ್ತ ರಾತ್ರಿಶಾಲೆ ಸೇರಿ ಪಿಯುಸಿ ಹಂತದವರೆಗೆ ಶಿಕ್ಷಣ ಮುಗಿಸಿರುವರು. ತದನಂತರ ಅವರ ಅಣ್ಣ ದಿ. ಮಂಜುನಾಥ ಪೂಜಾರಿಯವರ ಮುತುವರ್ಜಿಯಿಂದ 1995 ರಲ್ಲಿ ಅಮೇರಿಕಾಕ್ಕೆ ಹೋಗಿ ಹೊಟೇಲು ಉದ್ಯೋಗದಲ್ಲಿ ತೊಡಗಿಸಿಕೊಂಡರು. ನಿರಂತರ ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಮೇಲೇರಿ ಸ್ವಂತ ಹೊಟೆಲು ಉದ್ಯಮ ಆರಂಭಿಸಿದ ಸಾಹಸಿ ಸಾಧಕರು. ಅಮೇರಿಕಾದಲ್ಲಿ ಅನೇಕ ಕನ್ನಡ ಸಾಂಸ್ಕೃತಿಕ ಸೇವಾ ಸಂಸ್ಥೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾದವರು. ಇವರ ಪ್ರಾಮಾಣಿಕ, ಶಿಸ್ತು ಬದ್ಧ ಶ್ರಮಜೀವನ ಪಯಣಗಾಥೆ ರೋಚಕವಾಗಿದ್ದು ಸಮಾಜಕ್ಕೆ ಅತ್ಯಂತ ಸ್ಪೂರ್ತಿದಾಯಕವಾದುದು. ಇವರ ಪತ್ನಿ ಸುಮಿತಾ, ಮಗ ಆರ್ಯನ್ ಮತ್ತು ಇಬ್ಬರು ಮಗಳು ಅನಿಶಾ ಮತ್ತು ತಾರಾ ಒಳಗೊಂಡ ಸುಂದರ ಪರಿವಾರ.