ಕುಂದಾಪುರ: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು ಇತ್ತೀಚೆಗೆ ನಡೆಸಿದ ಎಂ.ಎಸ್ಸಿ (ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ತಾಲೂಕಿನ ಬಳ್ಳೂರು ಗ್ರಾಮದ ರೂಪಾ ಅವರು ಪ್ರಥಮ ರ್ಯಾಂಕ್ ಪಡೆಯುವುದರ ಜೊತೆಗೆ ಬಂಗಾರದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಕೂರು ನಿವಾಸಿಗಳಾದ ಗೋಪಾಲ ಪೂಜಾರಿ ಹಾಗೂ ಯಶೋಧ ಪೂಜಾರ್ತಿ ದಂಪತಿಯ ಪುತ್ರಿಯಾಗಿರುವ ರೂಪಾ ಅವರು ಹುಟ್ಟಿನಿಂದಲೇ ವಿಕಲಚೇತನರಾದರೂ ವಿಜ್ಞಾನದಂತಹ ಕಠಿಣ ವಿಷಯದಲ್ಲಿ ಈ ಅತ್ಯುನ್ನತ ಸಾಧನೆ ಮಾಡಿರುವುದು ರಾಜ್ಯಕ್ಕೇ ಮಾದರಿಯಾಗಿದೆ.
ಗ್ರಾಮೀಣ ಭಾಗದ ಪ್ರತಿಭೆಯಾಗಿರುವ ರೂಪಾ ಅವರ ಶೈಕ್ಷಣಿಕ ಸಾಧನೆಯ ಹಾದಿಯು ಪ್ರಾಥಮಿಕ/ಪ್ರೌಢ ಶಿಕ್ಷಣವನ್ನು ಬಸ್ರೂರು ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿಪೂರ್ವ ಕಾಲೇಜು (ಬೋರ್ಡ್ ಹೈಸ್ಕೂಲ್), ಕು೦ದಾಪುರ, ಪದವಿಯನ್ನು ಕುಂದಾಪುರ ಭ೦ಡಾರ್ಕರ್ಸ್ ಕಾಲೇಜಿನಲ್ಲಿ ಮುಗಿಸಿ ಸೂಕ್ಷ್ಮ ಜೀವ ವಿಜ್ಞಾನದಂತಹ (ಮೈಕ್ರೋಬಯಾಲಜಿ) ಪ್ರಾಯೋಗಿಕ ಮತ್ತು ಕಠಿಣ ವಿಷಯದಲ್ಲಿ ಈ ಸಾಧನೆ ಮಾಡಿದ್ದಾರೆ.
